ಪೋಕ್ಸೊ ವಿಶೇಷ ಪಿಪಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ಪೋಕ್ಸೊ ವಿಶೇಷ ಪಿಪಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ಉಡುಪಿ: ಜಿಲ್ಲೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಸೇರಿದಂತೆ ಮನೋಜ್ ಹಾಗೂ ಸಂಜಯ್ ವಿರುದ್ಧ ಮಹಿಳಾ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ವಿಶೇಷ ಸರಕಾರಿ ಅಭಿಯೋಜಕ ಸೇರಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪ್ರಕರಣದ ವಿವರ:

ಬ್ರಹ್ಮಾವರ ಹಾವಂಜೆ ಗ್ರಾಮದ ಕೊಳಲಗಿರಿ ನಿವಾಸಿ ಸಂತ್ರಸ್ತ ಯುವತಿ ನಂದಾ ಹಾಗೂ ಸಂಜಯ್ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಅವಧಿಯಲ್ಲಿ 2024ರ ಜು.11 ಹಾಗೂ ನ.17ರಂದು ನಂದಾ ಅವರನ್ನು ತಿರುಗಾಡಲೆಂದು ಕರೆದುಕೊಂಡು ಹೋಗಿ, ಖಾಸಗಿ ಹೋಟೆಲಿನಲ್ಲಿ ರೂಮ್ ಮಾಡಿ, ದೈಹಿಕ ಸಂಪರ್ಕ ಬೆಳೆಸಿದ್ದು ಮದುವೆಯಾಗುವುದಾಗಿ ನಂಬಿಸಿದ್ದರು. ಆದರೆ, ಇತ್ತೀಚೆಗೆ ತನ್ನ ನಂಬರ್ ಬ್ಲಾಕ್ ಮಾಡಿ ಬೇರೆ ಯುವತಿ ಜೊತೆಗೆ ವಿವಾಹವಾಗಲು ಸಂಜಯ್ ಪ್ರಯತ್ನಿಸುತ್ತಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ 2025ರ ಜೂ.30ರಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಾತಿ ನಿಂದನೆ ಪ್ರಕರಣ:

ಯುವತಿ ಮಹಿಳಾ ಠಾಣೆಯಲ್ಲಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವೈ.ಟಿ.ರಾಘವೇಂದ್ರ ತನ್ನ ಕಚೇರಿಗೆ ಸಂತ್ರಸ್ತ ಯುವತಿಯನ್ನು ಕರೆಸಿ, ಸಂಜಯ್ ವಿರುದ್ಧ ದೂರು ಕೊಟ್ಟರೆ ಸರಿ ಇರುವುದಿಲ್ಲ. ನಿನ್ನ ವಿರುದ್ಧ ಉಡುಪಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕೇಸ್ ಹಾಕುತ್ತೇನೆ ಎಂದು ಗದರಿಸಿದ್ದಾರೆ ಎನ್ನಲಾಗಿದ್ದು, ವೈ.ಟಿ.ರಾಘವೇಂದ್ರ ಹಾಗೂ ಮನೋಜ್ ಯುವತಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿ ವಿಚಾರಣೆಗೆಂದು ಠಾಣೆಗೆ ಕರೆಯಿಸಿ ತೊಂದರೆ ಮಾಡಿದ್ದಾರೆ.

ಇಬ್ಬರೂ ಸೇರಿಕೊಂಡು ಅತ್ಯಾಚಾರ ಪ್ರಕರಣದ ಆರೋಪಿ ಸಂಜಯ್ ತಲೆಮರೆಸಿಕೊಳ್ಳಲು ಸಹಾಯ ಮಾಡಿ, ಆತನ ವಿರುದ್ದ ದೂರು ದಾಖಲಿಸದಂತೆ ಒತ್ತಡ ಹಾಕಿದ್ದಾರೆ. ಅಲ್ಲದೆ, ಉಡುಪಿ ನಗರದ ವೈ.ಟಿ. ರಾಘವೇಂದ್ರ ಅವರ ಕಚೇರಿಯಲ್ಲಿ 2017ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೀಳು ಜಾತಿಯವಳೆಂದು ನಿಂದನೆ ಮಾಡುತ್ತಿದ್ದರು. ಮನೆಯಿಂದ ನೀರು ತರಲು ತಿಳಿಸುತ್ತಿದ್ದು, ಊಟ ಮಾಡುವಾಗ ಆಫೀಸಿನ ಇತರ ಸಿಬ್ಬಂದಿಯನ್ನು ಹೊರತುಪಡಿಸಿ ತನ್ನನ್ನು ಮಾತ್ರ ಹೊರಗೆ ಕಳುಹಿಸುತ್ತಿದ್ದರು ಎಂದು 2025 ಜು.15ರಂದು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಮಹಿಳೆ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article