
ಶಾಸಕ ಸುನಿಲ್ ಕುಮಾರ್ ರಾಜೀನಾಮೆಗೆ ಶುಭದ ರಾವ್ ಆಗ್ರಹ
ಉಡುಪಿ: ಬೈಲೂರು ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕಿನ ಪರಶುರಾಮ ವಿಗ್ರಹ ಕಂಚಿನದ್ದಲ್ಲ ಎಂಬುದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಿಂದ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಜದ್ರೋಹ ಎಸಗಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡುವಂತೆ ಕಾರ್ಕಳ ಬ್ಲಾಕ್ ಅಧ್ಯಕ್ಷ ಶುಭದ ರಾವ್ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿಮೆ ನಿರ್ಮಿಸಲು ಶಿಲ್ಪಿ ಕೃಷ್ಣ ನಾಯ್ಕ್ 1.83 ಲಕ್ಷ ರೂ. ಪಡೆದು ಪ್ರತಿಮೆಯನ್ನು ಕಂಚಿನ ಲೋಹದಿಂದ ನಿರ್ಮಾಣ ಮಾಡದೆ ಹಿತ್ತಾಳೆ ಲೋಹದಿಂದ ಮಾಡಿದ್ದಾರೆ ಎಂಬುದಾಗಿ ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ತಿಳಿದುಬಂದಿದೆ.
ಪ್ರತಿಮೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಉಡುಪಿ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ. ಕುಮಾರ್ ವರ್ಕ್ ಆರ್ಡರ್‌ನಲ್ಲಿರುವ ಷರತ್ತುಗಳನ್ನು ಪಾಲಿಸಿಲ್ಲ ಹಾಗೂ ಪರಶುರಾಮ ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿರುವುದಾಗಿ ಸುಳ್ಳು ಹೇಳಿ ಅದನ್ನು ಉಡುಪಿ ಅಲೆವೂರು ಪ್ರಗತಿ ನಗರದಲ್ಲಿರುವ ನಿರ್ಮಿತಿ ಕೇಂದ್ರದ ಶೆಡ್‌ನಲ್ಲಿ 2023ರ ಅ.12ರಿಂದ ಸ೦24ರ ಫೆ.25ರ ವರೆಗೆ ಅಡಗಿಸಿಟ್ಟಿರುವುದು ತಿಳಿದುಬಂದಿದೆ.
ಅರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ್, ಅರುಣ್ ಕುಮಾರ್ ಹಾಗೂ ಸಚಿನ್ ವೈ. ಕುಮಾರ್ ಅಪರಾಧಿ ಒಳಸಂಚು, ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ ಸಾಕ್ಷಿ ನಾಶ ಮಾಡಿರುವ ಆರೋಪದಲ್ಲಿ ಅವರ ವಿರುದ್ಧವೂ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.
2023ರ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಶಾಸಕ ಸುನಿಲ್ ಕುಮಾರ್ ನಡೆಸಿದ ವ್ಯವಸ್ಥಿತ ಪೂರ್ವಯೋಜಿತ ತಂತ್ರ ಇದಾಗಿದೆ. ಪರಶುರಾಮನ ಕಂಚಿನ ಪ್ರತಿಮೆ ನಿರ್ಮಿಸಿರುವುದಾಗಿ ಕಳೆದ ಎರಡು ವರ್ಷದಿಂದ ನಿರಂತರ ಸುಳ್ಳು ಹೇಳಿ ಜನತೆಗೆ ಎಸಗಿದ ಧಾರ್ಮಿಕ ನಂಬಿಕೆ ದ್ರೋಹ, ಎಲ್ಲಕ್ಕಿಂತ ಮಿಗಿಲಾಗಿ ಅಂದಿನ ಮುಖ್ಯಮಂತ್ರಿ ಬೊಮ್ಮಯಿ ಮತ್ತು ತನ್ನ ಸಚಿವ ಸಂಪುಟದ ಸಚಿವರನ್ನು ಕರೆಯಿಸಿ ಅವರಿಂದ ನಕಲಿ ಪ್ರತಿಮೆ ಉದ್ಘಾಟಿಸಿ ತನ್ನದೇ ಸರಕಾರಕ್ಕೆ ದ್ರೋಹ ಎಸಗಿದ ರಾಜದ್ರೋಹ ಪ್ರಕರಣವೂ ಆಗಿದ್ದು, ಶಾಸಕ ಸುನಿಲ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾರ್ಕಳ ಕಾಂಗ್ರೆಸ್ ಆಗ್ರಹಿಸುವುದಾಗಿ ಶುಭದ ರಾವ್ ತಿಳಿಸಿದರು.
ಈಮಧ್ಯೆ, ಕಾಂಗ್ರೆಸಿಗರ ಫೈಬರ್ ಪ್ರತಿಮೆ ಆರೋಪದಲ್ಲಿ ಹುರುಳಿಲ್ಲ. ಆ ಮೂಲಕ ಕಾಂಗ್ರೆಸ್‌ಗೆ ಸೋಲಾಗಿದೆ ಎನ್ನುವ ಸುನಿಲ್ ಕುಮಾರ್ ಮಾತು ಮೂರ್ಖತನದ್ದಾಗಿದೆ. ನಮ್ಮ ಆರೋಪಕ್ಕೆ ನಾವು ಬದ್ಧರಾಗಿದ್ದು, ಶಾಸಕ ಸುನಿಲ್ ಕುಮಾರ್ ಸವಾಲು ಸ್ವೀಕರಿಸುವರೇ ಎಂದು ಪ್ರಶ್ನಿಸಿದ ಶುಭದ ರಾವ್, ಪರಶುರಾಮ ಪ್ರತಿಮೆಯ ಸೊಂಟದ ಕೆಳಗಿನ ಭಾಗದ ಸುತ್ತಲೂ ಗ್ಲಾಸ್ ಫೈಬರ್ ಲೇಪಿತ ಅಂಶಗಳು ಕಂಡುಬಂದಿತ್ತು ಮತ್ತು ಸುತ್ತಲೂ ಅದರ ತುಂಡುಗಳು ಬಿದ್ದಿದ್ದವು. ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಮಾಡಿಲ್ಲ ಎನ್ನುವ ನಮ್ಮ ಆರೋಪ ಸತ್ಯವಾಗಿದೆ. ಆ ಮೂಲಕ ಕಾಂಗ್ರೆಸ್ ಹೋರಾಟಕ್ಕೆ ಜಯವಾಗಿದೆ. ಶಾಸಕರ ತಪ್ಪಿನಿಂದಾಗಿ ಶಿಲ್ಪಿ ಹಾಗೂ ಸರ್ಕಾರಿ ಅಧಿಕಾರಿಗಳು ಶಿಕ್ಷೆ ಅನುಭವಿಸುವಂತಾಗಿದೆ ಎಂದರು.
ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಇದ್ದರು.