ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನ ಖಂಡಿಸಿ ಆ.20 ರಂದು ಬಿ.ಸಿ.ರೋಡಿನಲ್ಲಿ ‘ಜನಾಗ್ರಹ ಸಭೆ’
ಸೋಮವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವೇದಿಕೆಯ ಪ್ರಮುಖರು, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಕೆಲ ಧರ್ಮದ್ರೋಹಿಗಳು, ಎಡಚರರು, ಯುಟ್ಯೂಬರ್‌ಗಳು ಕ್ಷೇತ್ರದ ಹಾಗೂ ಧರ್ಮಾಧಿಕಾರಿಗಳನ್ನು ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸುತ್ತಿರುವುದು ಹಾಗೆಯೇ ಕಪೋಲಕಲ್ಪಿತವಾದ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ತೇಜೋವಧೆ ಮಾಡುವ ಮೂಲಕ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವುದು ಕ್ಷೇತ್ರದ ಭಕ್ತರಾದ ನಮ್ಮೆಲ್ಲರನ್ನು ಘಾಸಿಗೊಳಿಸಿದೆ ಎಂದರು.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಲೇಬೇಕು ಇದರಲ್ಲಿ ಎರಡು ಮಾತಿಲ್ಲ ಆದರೆ ಇದರ ನೆಪದಲ್ಲಿ ಕ್ಷೇತ್ರ ಹಾಗೂ ಧರ್ಮಾಧಿಕಾರಿಯವರ ಅವಹೇಳನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಸರಕಾರ ರಚಿಸಿರುವ ಎಸ್‌ಐಟಿ ತನಿಖೆಯಲ್ಲು ಪೂರಕವಾದ ಅಂಶಗಳು ಪತ್ತೆಯಾಗದಿದ್ದು, ಈ ನಿಟ್ಟಿನಲ್ಲಿ ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆದು ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸರಕಾರ ಮಾಡಬೇಕಾದ ಜನಪಯೋಗಿ ಕಾರ್ಯಗಳನ್ನು ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಾರ್ಯರೂಪಕ್ಕೆ ತಂದು ಗ್ರಾಮೀಣ ಭಾಗದ ಜನರಿಗೆ ಸ್ವಾವಲಂಬಿ ಬದುಕು ನೀಡಿದೆ. ಧರ್ಮಾಧಿಕಾರಿ ಡಾ.ಹೆಗ್ಗಡೆಯವರ ದೂರದೃಷ್ಠಿಯ ಯೋಚನೆ, ಯೋಜನೆಯಿಂದ ಹತ್ತುಹಲವು ಅಭಿವೃದ್ಧಿ ಕೆಲಸಗಳಾಗಿದೆ. ಇದೀಗ ಕೆಲ ಧರ್ಮದ್ರೋಹಿಗಳು ಅಪಪ್ರಚಾರದ ಮೂಲಕ ಅವರ ತೇಜೋವಧೆ ನಡೆಸಿ ಸಮಜೋಪಯೋಗಿ ಕಾರ್ಯವನ್ನು ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ಕ್ಷೇತ್ರದ ಭಕ್ತಸಮೂಹ ಇನ್ನುಮುಂದೆ ಸಹಿಸಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದರು.
ಮುಖಂಡರಾದ ಎನ್. ಪ್ರಕಾಶ್ ಕಾರಂತ್ ಮಾತನಾಡಿ, ಧರ್ಮಸ್ಥಳ ಕುರಿತು ಅಲ್ಪತನದಿಂದ ಮಾತನಾಡುವುದು ನಮಗೆ ಬೇಸರ ತಂದಿದೆ ಎಂದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಮಾತನಾಡಿ, ಬಂಟ್ವಾಳದಲ್ಲೇ ಜನಿಸಿ, ಬಾಲ್ಯವನ್ನು, ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳದಲ್ಲೇ ಪೂರೈಸಿರುವ ಡಾ. ಹೆಗ್ಗಡೆಯವರು ಶಿಕ್ಚಣ, ಧಾರ್ಮಿಕ, ಸಾಹಿತ್ಯ ಹೀಗೆ ಹತ್ತು ಹಲವು ವಿಚಾರಗಳಿಗೆ ನೀಡಿರುವ ಕೊಡುಗೆ ಅಪಾರವಾಗಿದೆ, ಅಂತಹವರ ಹಾಗೂ ಕ್ಷೇತ್ರದ ಬಗ್ಗೆ ಅವಹೇಳನ ಕಾರ್ಯ ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದರು.
ಪ್ರಮುಖರಾದ ರಾಮದಾಸ ಬಂಟ್ವಾಳ ಮಾತನಾಡಿ, ಸಮಾಜಪರ ಕಾರ್ಯ ನಡೆಸುತ್ತಿರುವ ಭವ್ಯ ಸಂಸ್ಕೃತಿಯನ್ನು ಶಿಥಿಲಗೊಳಿಸುವ ದೊಡ್ಡ ಷಡ್ಯಂತ್ರ ಅಡಗಿದೆ. ಅಧಾರರಹಿತವಾಗಿ ವಯಕ್ತಿಕ ದ್ವೇಷ ಸಾಧನೆಗೆ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಸ್‌ಐಟಿ ಸಮಗ್ರ ತನಿಖೆ ನಡೆಸಿ ಇದರ ಹಿಂದಿರುವ ಅಸಲಿಯತ್ತನ್ನು ಬಯಲಿಗೆಳೆಯಬೇಕು ಎಂದರು.
ಜನಾಗ್ರಹ ಸಭೆ, ಮನವಿ ಸಲ್ಲಿಕೆ:
ಆಗಸ್ಟ್ 20ರಂದು ಬೆಳಗ್ಗೆ 10 ಗಂಟೆಗೆ ಸ್ಪರ್ಶಾಕಲಾಮಂದಿರದಲ್ಲಿ ಜನಾಗ್ರಹ ಸಭೆ ನಡೆಯಲಿದ್ದು, ಬಳಿಕ ಇಲ್ಲಿಂದ ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಮೆರವಣಿಗೆಯಲ್ಲಿ ತೆರಳಿ ವಾಪಾಸ್ ಬಂದು ತಾಲೂಕು ಕಚೇರಿಯಲ್ಲಿ ಸಂಪನ್ನಗೊಳ್ಳಲಿದೆ. ತದನಂತರ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಪ್ರಮುಖರಾದ ಸುದರ್ಶನ್ ಜೈನ್ ವಿವರಿಸಿದರು.
ಮುಸುಕುಧಾರಿ ಅನಾಮಿಕ ದಿನಕ್ಕೊಂದು ಸ್ಥಳ ತೋರಿಸಿ ಉತ್ಖನನ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗದಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ನಗೆ ಪಾಟಲೀಗೀಡಾಗಿದೆ. ಕ್ಷೇತ್ರದ ಭಕ್ತಾದಿಗಳ ತಾಳ್ಮೆಯ ಕಟ್ಟೆ ಹೊಡೆದಿದ್ದು, ಬೀದಿಗೆ ಬರುತ್ತಿದ್ದಾರೆ. ಸರಕಾರ ಕ್ಷೇತ್ರ ಮತ್ತು ಧರ್ಮಾಧಿಕಾರಿಯವರನ್ನು ಬಹಿರಂಗವಾಗಿ ಅವಹೇಳನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುದರ್ಶನ್ ಜೈನ್ ಒತ್ತಾಯಿಸಿದರು.
ಪ್ರಮುಖರಾದ ಅಶೋಕ್ ಶೆಟ್ಟಿ ಸರಪಾಡಿ, ತುಂಗಪ್ಪ ಬಂಗೇರ, ಪ್ರವೀಣ್ ಕಾಡಬೆಟ್ಟು, ಸುಭಾಶ್ಚಂದ್ರ ಜೈನ್, ಪ್ರಭಾಕರ ಪ್ರಭು, ವಸಂತ ಮಣಿಹಳ್ಳ, ಸುರೇಶ್ ಕುಲಾಲ್, ಶೇಖರ ಶೇಖರ ಸಾಮಾನಿ, ಪುರುಷೋತ್ತಮ ಮಜಲು, ನವೀನ್ ಚಂದ್ರ ಶೆಟ್ಟಿ, ರೊನಾಲ್ಡ್ ಡಿಸೋಜ, ಸದಾನಂದ ಗೌಡ ನಾವುರ, ಜಯಕೀರ್ತಿ ಜೈನ್, ಜಯಚಂದ್ರ ಬೊಲ್ಮಾರ್ ಮತ್ತಿತರರು ಉಪಸ್ಥಿತರಿದ್ದರು.