ಬಂಟ್ವಾಳ ತಾಲೂಕು ಆಡಳಿತದಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
ತಾಲೂಕು ಆಡಳಿತ ಸೌಧದ ಮುಂಭಾಗ ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ ಉಪಸ್ಥಿತಿಯಲ್ಲಿ ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು.
ಕಲ್ಲಡ್ಕ ಶ್ರೀರಾಮವಿದ್ಯಾ ಕೇಂದ್ರದ ವಿದ್ಯಾರ್ಥಿಗಳ ಆಕರ್ಷಕ ವಾದ್ಯಗೋಷ್ಠಗೆ ಪೊಲೀಸ್, ಗೃಹರಕ್ಷಕ, ಸೌಟ್ಸ್, ಗೈಡ್ಸ್ ನ ಪಥಸಂಚಲ ಗಮನಸೆಳೆಯಿತು.
ಬಳಿಕ ತಾಲೂಕು ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬಂಟ್ವಾಳ ಎಸ್.ವಿ.ಎಸ್. ವಿದ್ಯಾಗಿರಿ ಹೈಸ್ಕೂಲ್ ವಿದ್ಯಾರ್ಥಿನಿ ಭೂಮಿಕಾ ಎಸ್. ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿ, ಇಂದು ಶಿಕ್ಷಣ, ಆರೋಗ್ಯ, ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆಗಳಿಂದ ಭಾರತ ಗಮನ ಸೆಳೆದಿದೆ ಎಂದರು.
ಬುಡಾ ಅಧ್ಯಕ್ಷ ಬೇಬಿ ಕುಂದರ್ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮಾತನಾಡಿದರು. ತಹಸೀಲ್ದಾರ್ ಡಿ.ಅರ್ಚನಾ ಭಟ್, ಶಾಸಕ ರಾಜೇಶ್ ನಾಯ್ಕ್ ಸಂದೇಶ ನೀಡಿ, ತ್ಯಾಗ, ಬಲಿದಾನಗಳಿಂದ ದೊರಕಿದ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಕೆಲಸವಾಗಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟ ಮಾತನಾಡಿ, ಜನಸಾಮಾನ್ಯರಿಗೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುತುವರ್ಜಿಯಿಂದ ಕೆಲಸ ಮಾಡಿದಾಗ ಸ್ವಾತಂತ್ರ್ಯ ದೊರಕಿದ್ದು ಸಾರ್ಥಕ ಎನಿಸುತ್ತದೆ ಎಂದರು.
ಈ ಸಂದರ್ಭ ನಾನಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಎಪಿಎಂಸಿ ಅಧಿಕಾರಿ ಶಶಾಂಕ್, ನಗರ ಪೊಲೀಸ್ ಠಾಣೆ ಎಸ್.ಐ. ಸಂದೀಪ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಉಪಸ್ಥಿತರಿದ್ದರು. ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.