ನಿಷೇಧಿತ ಪದ ಬಳಕೆಯ ಭಜನೆ ಹಾಡು ನಿರ್ಬಂಧಕ್ಕೆ ದಲಿತ ಮುಖಂಡರ ಆಗ್ರಹ
ಬಂಟ್ವಾಳ ತಹಶಿಲ್ದಾರ್ ಡಿ. ಅರ್ಚನಾ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ಸತೀಶ್ ಅರಳ ಅವರು ವಿಷಯ ಪ್ರಸ್ತಾವಿಸಿ, ನಿಷೇಧಿತ ಪದಗಳಿರುವ ಭಜನಾ ಹಾಡನ್ನು ಜಿಲ್ಲೆಯಲ್ಲೆಡೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಕಿ ಕುಣಿದು ಅವಹೇಳನ ಮಾಡಲಾಗುತ್ತಿದ್ದು, ಇದನ್ನು ಜಿಲ್ಲಾಮಟ್ಟದಲ್ಲೇ ನಿರ್ಬಂಧಿಸಿ ಕ್ರಮ ಕೈಗೊಳ್ಳಬೇಕು, ಈ ಬಗ್ಗೆ ಸಭೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿಯವರಿಗೆ ಕಳಿಸಿಕೊಡಬೇಕೆಂದು ಆಗ್ರಹಿಸಿದರು.
ಇದಕ್ಕೆ ದಲಿತ ಮುಖಂಡರಾದ ನಾರಾಯಣ ಪುಂಚಮೆ, ಗಂಗಾಧರ್ ಸಹಿತ ಇನ್ನತರರು ದ್ವನಿಗೂಡಿಸಿದರು. ತಹಶೀಲ್ದಾರ್ ಅವರ ನಿರ್ದೇಶನದಂತೆ ಡಿ.ಸಿ. ಮತ್ತು ಎಸ್ಪಿಯವರಿಗೆ ಕ್ರಮಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
13 ಕೋ.ರೂ. ಬಂದಿಲ್ಲ:
ಪುರಸಭೆಯಿಂದ ಪ.ಜಾ. ಮತ್ತು ಪಂ.ದ ಸಮುದಾಯದ ಅಭಿವೃದ್ಧಿಗೆ ನಯಾಪೈಸೆ ಅನುದಾನ ದೊರಕುತ್ತಿಲ್ಲ, ನೇತ್ರಾವತಿ ನದಿ ತೀರದಲ್ಲಿ ವಾಸವಾಗಿರುವ ನಮ್ಮ ಕಾಲೊನಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ, ಕನಿಷ್ಠ ನೀರು ಕೊಡಿಸಲು ಅಧಿಕಾರಿಗಳಿಂದ ಸಾಧ್ಯವಾಗವುದಿಲ್ಲ, ನಮ್ಮ ಸಮಸ್ಯೆಗಳು 10 ವರ್ಷವಾದರೂ ಬಗೆಹರಿದಿಲ್ಲ. ಹಾಗಾದರೆ ಕುಂದುಕೊರತೆಯ ಸಭೆ ನಡೆಸುವ ಅಗತ್ಯವಾದರೂ ಏನಿದೆ? ಎಂದು ಗಂಗಾಧರ ಪರಾರಿ ಆಕ್ರೋಶಭರಿತರಾಗಿ ಅವರು ಪ್ರಶ್ನಿಸಿದರು.
ಸಮುದಾಯದ ಅಭಿವೃದ್ಧಿಗಾಗಿ 13 ಕೋ.ರೂ. ಅನುದಾನ ಮಂಜೂರಾಗಿದೆ ಎಂಬ ಮಾಹಿತಿ ಇದೆ. ಇದರಲ್ಲು ಕ್ರಿಯಾಯೋಜನೆ ತಯಾರಿಸಿ ಬಳಕೆ ಮಾಡದೆ ನಮಗೆ ಅನ್ಯಾಯವೆಸಗಿದೆ ಎಂದು ವಿಶ್ವನಾಥ ಚೆಂಡ್ತಿಮಾರ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಪುರಸಭೆಯ ಸಮುದಾಯ ಅಧಿಕಾರಿ ಉಮಾವತಿ ಅವರು ಅಮೃತ ಯೋಜನೆಯಡಿ ಮಂಜೂರಾದ 13 ಕೋ.ರೂ. ಪುರಸಭೆಗೆ ಇನ್ನು ಬಂದಿಲ್ಲ, ಅದು ಜಿಲ್ಲಾಧಿಕಾರಿ ಕಚೇರಿಯಲ್ಲೇ ಪೆಂಡಿಂಗ್ ಇದೆ. ಪ.ಜಾ. ಮತ್ತು ಪಂ.ದ ಆರೋಗ್ಯವಿಮೆಯನ್ನು 30 ರಿಂದ 50 ಸಾ.ರೂ.ಗೆ ಹೆಚ್ಚಿಸಲಾಗಿದ್ದು, ಪ್ರತಿವರ್ಷ ಅದನ್ನು ರಿನಿವಲ್ ಕೂಡ ಮಾಡಲಾಗುತ್ತಿದೆ ಎಂದು ಉತ್ತರಿಸಿದರು.
ಗಂಗಾಧರ್ ಅವರ ನೀರಿನ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪ್ರಭಾರ ಮುಖ್ಯಾಧಿಕಾರಿ ಮತ್ತಡಿ ಭರವಸೆ ನೀಡಿದರು.
ಇದೇ ವೇಳೆ ಗಂಗಾಧರ್ ಅವರು ಏರುಧ್ವನಿಯಲ್ಲಿ ಮಾತನಾಡಿದಾಗ ಮಧ್ಯಪ್ರವೇಶಿಸಿದ ತಹಶೀಲ್ದಾರ್ ಅರ್ಚನಾ ಭಟ್ ಅವರಿಗೆ ಟೀ ಕೊಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ತಹಶೀಲ್ದಾರರಿಗೆ ತಿರುಗೇಟು ನೀಡಿದ ಗಂಗಾದರ್ ನಾವು ಟೀ ಕುಡಿಯಲು ಬಂದಿಲ್ಲ, ನಮ್ಮ ಸಮುದಾಯದ ಸಮಸ್ಯೆ ಮೊದಲಿಗೆ ಪರಿಹಾರವಾಗಬೇಕು, ಇಲ್ಲದಿದ್ದರೆ ಮೀಟಿಂಗ್‌ಗೇ ಬೆಲೆಯಿಲ್ಲ ಎಂದು ಕುಟುಕಿದರು.
ವಾಗ್ವಾದ:
ತಾಲೂಕು ವ್ಯಾಪ್ತಿಯಲ್ಲಿ ಪ.ಜಾ. ಪಂ.ದ ಬಂಟ್ವಾಳ ತಾಲೂಕಿನ ಕಂದಾಯ ಮತ್ತು ವಿವಿಧ ಅಧಿಕಾರಿಗಳಿಂದ ನ್ಯಾಯ ಸಿಗುತ್ತಿಲ್ಲ, ಗ್ರಾಮಕರಣಿಕರಿಂದ ಹಿಡಿದು ಕೆಲವು ಅಧಿಕಾರಿಗಳು ತಪ್ಪು ಮಾಹಿತಿಯನ್ನು ಒದಗಿಸಿ ಬಲಾಡ್ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪ.ಜಾ. ಪಂ.ದವರ ಕಡತಗಳನ್ನು ವಿಲೇ ಮಾಡಲು ಸತಾಯಿಸಲಾಗುತ್ತಿದೆ. ಡಿ.ಸಿ. ಮನ್ನಾ ಜಾಗವನ್ನು ನೀಡಲು ಎ.ಸಿ.ಯವರು ಅದೇಶಿಸಿರೂ ಬಂಟ್ವಾಳ ತಹಶಿಲ್ದಾರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಯಾಕೆ? ಕಚೇರಿಗೆ ಬಂದು ಮಾತನಾಡಿದಾಗಲು ಅಸಮರ್ಪಕ ಉತ್ತರ ನೀಡಿ ನಮ್ಮನ್ನು ಸಾಗ ಹಾಕಲಾಗುತ್ತದೆ ಎಂದು ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ಗಂಭೀರ ಆರೋಪ ಮಾಡಿದರಲ್ಲದೆ ಈ ವಿಚಾರ ಇದೇ ಸಭೆಯಲ್ಲೇ ಇತ್ಯರ್ಥ ಆಗಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭ ಕೆಲ ಹೊತ್ತು ತಹಶೀಲ್ದಾರ್ ಅರ್ಚನಾ ಭಟ್ ಹಾಗೂ ಬೆದ್ರಕಾಡು ನಡುವೆ ವಾಗ್ವಾದ ನಡೆಯಿತು. ಬಳಿಕ ನಿಗದಿತ ಕಡತವನ್ನು ತರುವಂತೆ ತಮ್ಮ ಸಿಬ್ಬಂದಿಗೆ ತಹಶೀಲ್ದಾರ್ ಸೂಚಿಸಿದರು.
ಅರಣ್ಯ ಇಲಾಖೆಯಿಂದ ಒತ್ತುವರಿ:
ಪ.ಜಾ.ಮತ್ತು ಪಂ.ಗೆ ಮೀಸಲಿಟ್ಟ ಡಿ.ಸಿ.ಮನ್ನಾ ಜಮೀನನ್ನು ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಒತ್ತುವರಿ ಮಾಡಿದ್ದು, ಇದನ್ನು ತೆರವುಗೊಳಿಸಿ ಸಮುದಾಯಕ್ಕೆ ಹಂಚಿಕೆ ಮಾಡುವಂತೆ ಜನಾರ್ಧನ ಬೋಳಂತೂರು ಸಭೆಯಲ್ಲಿ ಆಗ್ರಹಿಸಿದರು. ಇಂತಹ ಒತ್ತುವರಿಯಾದ ಬಗ್ಗೆ ಕಂದಾಯ ಇಲಾಖೆಯಲ್ಲಿ ಮಾಹಿತಿ ಇಲ್ಲ ಎಂದು ತಹಶೀಲ್ದಾರರು ತಿಳಿಸಿದರು. ಜನಾರ್ದನ ಬೋಳಂತೂರು ಹಾಗೂ ನಾರಾಯಣ ಪುಂಚಮೆ ಅರಣ್ಯ ಇಲಾಖೆ ಒತ್ತುವರಿ ಮಾಡಿರುವ ವಿವಿಧ ಗ್ರಾಮಗಳ ಪಟ್ಟಿಯನ್ನು ನೀಡಿದರು.