ಕೊರಗ ಸಮುದಾಯದ ದಾಖಲೆ ಸರಿಪಡಿಸಲು ತಾಲೂಕು ಅಧಿಕಾರಿಗಳಿಂದ ಅದಾಲತ್
Thursday, August 7, 2025
ಬಂಟ್ವಾಳ: ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವೀರಕಂಬ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಕೊರಗ ಸಮುದಾಯದ ಜನರ ದಾಖಲೆಗಳ ಸರಿಪಡಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅದಾಲತ್ ಕಾರ್ಯಕ್ರಮ ವೀರಕಂಬ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸಮರ್ಪಕವಾದ ದಾಖಲಾತಿಗಳಿಲ್ಲದ ಕಾರಣದಿಂದಾಗಿ ಸರಕಾರದ ವಿವಿಧ ಸವಲತ್ತಿನಿಂದ ಕೊರಗ ಸಮುದಾಯ ವಂಚಿತವಾಗುತ್ತಿದ್ದು, ಈ ನಿಟ್ಟಿನಲ್ಲಿ ಅದಾಲತ್ ನಡೆಸುವಂತೆ ಇತ್ತೀಚೆಗೆ ತಾ.ಪಂ. ಸಭಾಂಗಣದಲ್ಲಿ ಇಒ ಸಚ್ಚಿನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಮುಖಂಡರು ಒತ್ತಾಯಿಸಿದ ಹಿನ್ನಲೆಯಲ್ಲಿ ಗುರುವಾರ ಈ ಅದಾಲತ್ ವೀರಕಂಬ ಗ್ರಾ.ಪಂ.ನಲ್ಲಿ ಆಯೋಜಿಸಲಾಗಿತ್ತು.
ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಮುಂತಾದ ದಾಖಲೆಗಳು ಸಮುದಾಯದ ಜನರಲ್ಲಿ ಇನ್ನು ಸಮರ್ಪಕವಾಗಿಲ್ಲದಿರುವುದರಿಂದ ಮತ್ತು ಇದ್ದವರ ದಾಖಲೆಗಳು ಒಂದಕ್ಕೊಂದು ತಾಳೆಯಾಗದಿದ್ದರಿಂದ ಸರಕಾರದ ಯಾವೊಂದು ಸವಲತ್ತುಗಳನ್ನು ಪಡೆಯಲಾಗುತ್ತಿಲ್ಲ ಹಾಗೂ ಆರೋಗ್ಯ ಸಂಬಂಧಿ ತಪಾಸಣೆಗೂ ಸಾಧ್ಯವಾಗದ ಬಗ್ಗೆ ಕೊರಗ ಸಮುದಾಯದ ಮುಖಂಡರು ಕುಂದುಕೊರತೆ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಗಮನಸೆಳೆದಿದ್ದರು. ಹಾಗೆಯೇ ಈ ಸಂದರ್ಭದಲ್ಲಿ ಸಮುದಾಯದ ಜನರ ಆರೋಗ್ಯ ತಪಾಸಣೆ ನಡೆಸಬೇಕು, ಸರಕಾರದಿಂದ ದೊರಕುವ ಸವಲತ್ತಿನ ಬಗ್ಗೆಯು ಮಾಹಿತಿ ನೀಡಬೇಕೆಂದು ಕೋರಿದ್ದರು.
ಇದಕ್ಕೆ ಸ್ಪಂದಿಸಿದ ಇಒ ಸಚ್ಚಿನ್ ಕುಮಾರ್ ಅವರು ಅದಾಲತ್ ನಡೆಸಿ ದಾಖಲೆ ಪತ್ರಗಳನ್ನು ಸರಿಪಡಿಸುವ ಭರವಸೆ ನೀಡಿದ್ದರು. ಅದರಂತೆ ಈ ಅದಾಲತ್ ನಡೆಸಿ ಕೊರಗ ಸಮುದಾಯದ ಕೆಲವೊಂದು ದಾಖಲೆ ಪತ್ರವನ್ನು ಸರಿಪಡಿಸುವ ಹಾಗೂ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ತಾಲೂಕು ಉಪ ತಹಸಿಲ್ದಾರ್ ನವೀನ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಅಶೋಕ್ ರೈ, ಆಹಾರ ಶಿರಸ್ತೆದಾರ ರವಿ, ಸಮಾಜ ಕಲ್ಯಾಣಾಧಿಕಾರಿ ವಿನಯ್ ಕುಮಾರಿ ಕೆ.ಬಿ., ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷ ಜನಾರ್ಧನ ಪೂಜಾರಿ, ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ರೂಪಕಲ, ಕೊರಗ ಸಮುದಾಯದ ಮುಖಂಡರಾದ ಸುಂದರ್, ಕೊಗ್ಗ, ರಮೇಶ್, ನವೀನ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.

