ಧರ್ಮಸ್ಥಳ ಪ್ರಕರಣ: ಕಾರ್ಯಾಚರಣೆ ಅಂತ್ಯ ಸಾಧ್ಯತೆ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ದೂರುದಾರನ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿ ತನಿಖೆ ಶನಿವಾರವೂ ಮುಂದುವರಿಯುವುದೇ ಇಲ್ಲವೇ ಎಂಬುದರ ಬಗ್ಗೆ ಇನ್ನೂ ಖಚಿತತೆ ವ್ಯಕ್ತವಾಗಿಲ್ಲ.
ಆ.15 ರಂದು ಸ್ವಾತಂತ್ರ್ಯ ದಿನ ಹಾಗೂ ಸರಕಾರಿ ರಜೆಯಾದ್ದರಿಂದ ಯಾವುದೇ ಕಾರ್ಯಾಚರಣೆ ನಡೆದಿಲ್ಲ. ಆದರೆ ಆ.16 ರಂದು ಎಸ್‌ಐಟಿ ತಂಡವು ಕಡೇ ಶೋಧ ನಡೆಸಿ ಪೂರ್ಣಗೊಳಿಸುವುದಾಗಿ ಹೇಳಲಾಗುತ್ತಿದೆ. ಈಗಾಗಲೇ ದೂರುದಾರ ಹಾಜರುಪಡಿಸಿದ್ದ ತಲೆಬುರುಡೆಗೂ ಅವನಿಗೂ ಸಂಬಂಧವಿಲ್ಲ, ಅವನಲ್ಲಿ ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಅದನ್ನು ಇನ್ಯಾರೋ ತಂದುಕೊಟ್ಟಿದ್ದು ಎಂಬ ವದಂತಿಯೂ ದಟ್ಟವಾಗಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆ ತಲೆಬುರುಡೆ ಬಗ್ಗೆ ಶನಿವಾರ ತನಿಖೆ ನಡೆದರೂ ನಡೆಯಬಹುದು ಎನ್ನಲಾಗಿದೆ. ಅದೇ ಕೊನೆಯ ಶೋಧವೋ ಅಥವಾ ಇನ್ನೂ ಇದೆಯೋ ಖಚಿತಗೊಂಡಿಲ್ಲ.
ಅನಾಮಿಕ ಹಾಗೂ ಇವನ ಹಿಂದೆ ಇರುವ ಶಕ್ತಿಯ ಬಗ್ಗೆಯೂ ಎಸ್‌ಐಟಿ ಮಾಹಿತಿ ಕಲೆಹಾಕಿದೆ ಎನ್ನಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸದನದಲ್ಲಿ ಷಡ್ಯಂತ್ರದ ಬಗ್ಗೆ ಪ್ರಸ್ತಾವಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ. ಒಟ್ಟಿನಲ್ಲಿ ಶನಿವಾರ ಹಾಗೂ ಸೋಮವಾರ ಎಲ್ಲದಕ್ಕೂ ಉತ್ತರ ಸಿಗುವ ಸಾಧ್ಯತೆ ಇದೆ.