ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳನ್ನು ಹೂತಿರುವ ಸ್ಥಳಗಳು ಗಿರೀಶ್ ಮಟ್ಟಣ್ಣವರ್‌ಗೂ ಗೊತ್ತು: ಜಯಂತ್

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳನ್ನು ಹೂತಿರುವ ಸ್ಥಳಗಳು ಗಿರೀಶ್ ಮಟ್ಟಣ್ಣವರ್‌ಗೂ ಗೊತ್ತು: ಜಯಂತ್


ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳನ್ನು ಹೂತಿರುವ ಸ್ಥಳಗಳು ಹೋರಾಟಗಾರ ಗಿರೀಶ್ ಮಟ್ಟಣ್ಣವರ್‌ಗೂ ಗೊತ್ತಿದೆ ಎಂದು ಸೌಜನ್ಯ ಪರ ಹೋರಾಟಗಾರ ಜಯಂತ್ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿಯಲ್ಲಿ ಇಂದು ಮಾಧ್ಯಮಗಳ ಜೊತೆ ಅವರು ಮಾತನಾಡಿ, ಎಸ್‌ಐಟಿ ರಚನೆಗೊ ಮುಂಚೆ ದೂರುದಾರ ಅನಾಮಿಕನಾಗಿದ್ದ ಚಿನ್ನಯ್ಯನ ಜೊತೆಗೆ ಗಿರೀಶ್ ಮಟ್ಟಣ್ಣವರ್ ಕೂಡ ಉತ್ಖನನ ಮಾಡಿದ ಎಲ್ಲ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಚಿನ್ನಯ್ಯ ಈಗ ಜಾಗ ಬದಲಿಸಿದ್ದಾನೆ. ಹಾಗಾಗಿ ಹೂತಿರುವ ಶವಗಳು ಪತ್ತೆಯಾಗಿಲ್ಲ ಎಂದಿದ್ದಾರೆ.

ಸ್ವಾಮೀಜಿಗೆ ಎಲ್ಲವೂ ಗೊತ್ತು:

ಚಿನ್ನಯ್ಯನನ್ನು ಕರೆದುಕೊಂಡು ಸ್ವಾಮೀಜಿಯೊಬ್ಬರ ಬಳಿ ಹೋಗಲಾಗಿತ್ತು ಎಂದು ಪುನರುಚ್ಚರಿಸಿದ ಜಯಂತ್, ಅವರೊಬ್ಬ ಪ್ರತಿಷ್ಠಿತ ಸ್ವಾಮೀಜಿ, ಅವರ ಹೆಸರು ಈಗ ಬಹಿರಂಗಪಡಿಸುವುದಿಲ್ಲ. ಸ್ವಾಮೀಜಿಯ ಎದುರು ಸುಳ್ಳು ಹೇಳಲು ಆಗುತ್ತಾ?. ಹಾಗಾಗಿ ಸ್ವಾಮೀಜಿ ಬಳಿ ಎಲ್ಲ ವಿಚಾರಗಳನ್ನು ತಿಳಿಸಲಾಗಿದೆ. ಆ ಸ್ವಾಮೀಜಿಗೆ ಎಲ್ಲವೂ ಗೊತ್ತು, ಸ್ವಾಮೀಜಿಯ ಹೆಸರು ನಾನು ಹೇಳುವುದಿಲ್ಲ ಎಂದರು.

ಸ್ವಾಮೀಜಿ ಬಳಿಗೆ ಹೋದವರು ಹೇಳುತ್ತಾರೆ, ದಿನಾಂಕ ಬೇಕಾದರೂ ತೆಗೆದುಕೊಳ್ಳಲಿ. ಎಸ್‌ಐಟಿ ಪೊಲೀಸರು ಎಲ್ಲವನ್ನು ತನಿಖೆ ಮಾಡಲಿ. ನಮ್ಮದು ದೇವಸ್ಥಾನದ  ವಿರುದ್ಧ ಪಿತೂರಿ ಅಲ್ಲ ಎನ್ನುವುದು ಸ್ವಾಮೀಜಿ ಭೇಟಿಯಿಂದ ಗೊತ್ತಾಗುತ್ತದೆ. ಸ್ವಾಮೀಜಿಯ ಹೆಸರನ್ನು ಆದಷ್ಟು ಬೇಗ ಬಹಿರಂಗ ಮಾಡುತ್ತೇವೆ. ಕಾಲ ಬಂದಾಗ  ಹೆಸರು ಬಹಿರಂಗವಾಗುತ್ತದೆ. ನಾನು ಸ್ವಾಮೀಜಿಯ ಭೇಟಿ ವೇಳೆ ಹೋಗಿಲ್ಲ. ಚಿನ್ನಯ್ಯನನ್ನು ಮಾತ್ರ ಸ್ವಾಮೀಜಿಯ ಬಳಿ ಕರೆದುಕೊಂಡು ಹೋಗಲಾಗಿತ್ತು ಎಂದಿದ್ದಾರೆ.

ಈ ಆಟ ಒಂದು ಹಂತಕ್ಕೆ ಬರಲಿ, ಆಮೇಲೆ ತೋರಿಸುತ್ತೇವೆ, ನಮ್ಮ ನಡುವೆ ಯಾವುದೇ ಬಿರುಕು ಇಲ್ಲ. ಕೆಲವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ  ಹೋರಾಟದಲ್ಲಿ ಬಿರುಕು ಬಂದಿಲ್ಲ ಸತ್ಯಪರ ನ್ಯಾಯಪರ ಹೋರಾಟ ಎಂದರು.

ತನ್ನ ಮನೆಗೆ ಎಸ್‌ಐಟಿ ನಡೆಸಿದ ದಾಳಿ ಕುರಿತು ಪ್ರತಿಕ್ರಿಯಿಸಿದ ಜಯಂತ್, ನನಗೆ ಭಯವಾಗಲು ಕಳ್ಳತನ ಮಾಡಿಲ್ಲ, ಅತ್ಯಾಚಾರ, ಕೊಲೆ ಮಾಡಿಲ್ಲ. ನಾನು ಊರಿನಲ್ಲಿ  ಇದ್ದೆ, ಕರೆದಿದ್ದರೆ ನಾನು ಕೂಡ ಹೋಗುತ್ತಿದ್ದೆ. ನನ್ನ ಮನೆಗೆ ಎಸ್‌ಐಟಿ ಬಂದಾಗ ಮಾಧ್ಯಮದವರಿಗೆ ತಿಳಿಸಿದೆ. ಮಗನಿಗೆ ಮನೆಗೆ ಹೋಗಿ ಸಹಕರಿಸಲು ಹೇಳಿದ್ದೆ, ಮಗಳಿಗೂ ತಿಳಿಸಿದ್ದೆ. ನನ್ನ ಮನೆಗೆ ದಾಳಿ ಆಗಬಹುದು ಎಂದು ಕನಸಲ್ಲೂ ಎಣಿಸಿರಲಿಲ್ಲ. ಆರ್‌ಟಿಐ ಮೂಲಕ ತೆಗೆದ ಎಲ್ಲ ದಾಖಲೆಗಳನ್ನು ಅಧಿಕಾರಿಗಳು  ತೆಗೆದುಕೊಂಡು ಹೋಗಿದ್ದಾರೆ. ಇದನ್ನು ನಾನು ಮಹಜರು ಎಂದು ಭಾವಿಸುತ್ತೇನೆ, ದಾಳಿ ಅಲ್ಲ ಎಂದರು.

ನಾನು ಚಿನ್ನಯ್ಯನನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದೆ, ಊಟ ಹಾಕಿದ್ದೆ, ಅದಕ್ಕೆ ಮಹಜರು ಮಾಡಿದ್ದಾರೆ. ಆದರೆ ನಾನು ಚಿನ್ನಯನಿಗೆ ಬುರುಡೆ ಕೊಟ್ಟಿಲ್ಲ. ಯಾವುದೇ ಲ್ಯಾಬಿನಿಂದಾಗಲಿ, ಮಣ್ಣಿನಿಂದಾಗಲಿ ನಾನು ಬುರುಡೆ ತೆಗೆದುಕೊಂಡು ಕೊಟ್ಟಿಲ್ಲ. ಸುಪ್ರೀಂ ಕೋರ್ಟಿಗೆ ತನಿಖೆ ಆಗಬೇಕು ಎಂಬ ಕಾರಣಕ್ಕೆ ದೆಹಲಿಗೆ  ಕರೆದುಕೊಂಡು ಹೋಗಿದ್ದೆ. ಅದಕ್ಕೋಸ್ಕರ ದೆಹಲಿಗೆ ಬುರುಡೆ ತೆಗೆದುಕೊಂಡು ಹೋಗಿದ್ದು ಹೌದು ಎಂದರು.

ಚಿನ್ನಯ್ಯನಿಗೆ ಕಾದಿದೆ ಮಾರಿಹಬ್ಬ:

ಚಿನ್ನಯ್ಯನಿಗೆ ಮಾರಿಹಬ್ಬ ಕಾದಿದೆ ಎಂದು ಆಗಲೇ ನನಗೆ ಗೊತ್ತಿತ್ತು. ಸೌಜನ್ಯ ಪ್ರಕರಣದಲ್ಲಿ ಆತ ಭಾಗಿಯಾಗಿದ್ದಾನೆ ಎನ್ನುವುದು ನನಗೆ ಗೊತ್ತು. ಹಾಗಾದರೆ ಪೊಲಿ ಸರಿಗೆ ಸೆಕ್ಷನ್ 164ರ (ಸಾಕ್ಷ್ಯ ಸಮೇತ ಹೇಳಿಕೆ ದಾಖಲು) ಅಡಿಯಲ್ಲಿ ಯಾಕೆ ಹೇಳಿಕೆ ನೀಡಿದ್ದಾನೆ? ಈಗ ಚಿನ್ನಯ್ಯ ನಮ್ಮನ್ನು ಹಳ್ಳಕ್ಕೆ ತಂದು ಹಾಕಿದ್ದಾನೆ. ಹಾಗಾಗಿ ಅವನಿಗೆ ಮಾರಿ ಹಬ್ಬ ಇದೆ ಎಂದರು.

ಗಿರೀಶ್ ಮಟ್ಟಣ್ಣವರ್‌ಗೆ ಮೊದಲೇ ಆತ ಅಗೆಯುವ ಸ್ಥಳಗಳನ್ನು ತೋರಿಸಿದ್ದ. ನನಗೆ ಏಪ್ರಿಲ್ ತಿಂಗಳ ನಂತರ ಚಿನ್ನಯ್ಯನ ವಿಚಾರ ಗೊತ್ತಾಗಿದೆ. ಆತ ಮಟ್ಟಣ್ಣವರ್‌ಗೆ ತೋರಿಸಿದ ಎಲ್ಲ ಜಾಗಗಳನ್ನು ಅಗೆದಿಲ್ಲ, ಆತ ತಾನು ಹೂತ ಜಾಗಗಳನ್ನು ಸರಿಯಾಗಿ ತೋರಿಸಿಲ್ಲ ಎಂದು ಜಯಂತ್ ಆರೋಪಿಸಿದರು.

ನೀನು ಬುರುಡೆ ತೆಗೆದುಕೊಟ್ಟರೆ ನಿನ್ನನ್ನು ಜೈಲಿಗೆ ಹಾಕುತ್ತೇವೆ ಎಂದು ಅವರೆಲ್ಲ ಬೆದರಿಸಿದ್ದಾರೆ. ಈ ರೀತಿಯ ಬೆದರಿಕೆ ಬಂದಿರುವುದು ನನಗೆ ಮೊದಲೇ ಗೊತ್ತಿತ್ತು.  ಅವನು ಸರಿಯಾಗಿ ತೋರಿಸದೆ ಇದ್ದರೆ ಎಸ್‌ಐಟಿಯವರು ಆತನಿಂದ ತೋರಿಸುವಂತೆ ಮಾಡುತ್ತಾರೆ. ದೊಡ್ಡ ಮಟ್ಟದಲ್ಲಿ ಹೆಣ್ಣು ಮಕ್ಕಳನ್ನು ಹೊತ್ತಿರುವ ಸ್ಥಳ ಆತ  ತೋರಿಸಿಲ್ಲ ಎಂದರು.

ಚಿನ್ನಯ್ಯ ಜೊತೆ ಎಸ್‌ಐಟಿ ತಂಡ ಬೆಂಗಳೂರಿನಿಂದ ವಾಪಸ್:

ಆಶ್ರಯ ನೀಡಿದ ಕಾರಣಕ್ಕೆ ಬೆಂಗಳೂರಿನಲ್ಲಿರುವ ಹೋರಾಟಗಾರ ಜಯಂತ್‌ನ ಅಲ್ಲಿನ ಮನೆಗೆ ಶನಿವಾರ ಆರೋಪಿ ಚಿನ್ನಯ್ಯನ ಎಸ್‌ಐಟಿ ತಂಡ ಕರೆದುಕೊಂಡು ಹೋಗಿ  ಮಹಜರು ನಡೆಸಿತ್ತು. ಅಲ್ಲಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಪಡೆದ ಬಳಿಕ ಭಾನುವಾರ ಚಿನ್ನಯ್ಯನನ್ನು ಕರೆದುಕೊಂಡು ತಂಡ ಬೆಳ್ತಂಗಡಿಯತ್ತ ಹೊರಟಿದೆ.  ಚಿನ್ನಯ್ಯ ವಾಸವಾಗಿದ್ದ ಮಂಡ್ಯ ಹಾಗೂ ತಮಿಳುನಾಡು ಭೇಟಿಯನ್ನು ಯಾವಾ ಕೈಗೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article