ಕಣ್ಣೂರಿನ ಮನೆಯೊಂದರಲ್ಲಿ ಸಂಭವಿಸಿದ ಸ್ಪೋಟದಲ್ಲಿ ಓರ್ವ ಮೃತ್ಯು: ನಾಡ ಬಾಬ್ ಸ್ಪೋಟದ ಶಂಕೆ
ವಲಸೆ ಕಾರ್ಮಿಕನ ಮೃತದೇಹ ಸ್ಪೋಟ ಸಂಭವಿಸಿದ ಮನೆಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಿಂದನ್ ಎಂಬ ನಿವೃತ್ತ ಶಾಲಾ ಶಿಕ್ಷಕನ ಒಡೆತನದ ಮನೆಯಲ್ಲಿ ಈ ಘಟನೆ ನಡೆದಿದೆ. ಆ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮನೆಯ ಮಾಲಕ ಗೋವಿಂದನ್ ಅವರು ಪಯ್ಯನ್ನೂರಿನಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಕಣ್ಣಾಪುರಂ ಪೊಲೀಸರು ಮತ್ತು ತಳಿಪರಂಬ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಶೋಧದ ಸಮಯದಲ್ಲಿ, ಅಧಿಕಾರಿಗಳು ಹಲವಾರು ಸ್ಫೋಟಗೊಳ್ಳದ ನಾಡ ಬಾಂಬ್‌ಗಳನ್ನು ಪತ್ತೆಹಚ್ಚಿದ್ದಾರೆ. ಇದರಿಂದಾಗಿ ಬಾಂಬ್ ತಯಾರಿಕೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂಬ ಅನುಮಾನ ಉಂಟಾಗಿದೆ.
ಸ್ಪೋಟದ ತೀವ್ರತೆಗೆ ಸಮೀಪದ ಮನೆಗಳಿಗೆ ಕೂಡ ಹಾನಿಯಾಗಿದೆ. ಮನೆಯನ್ನು ಬಾಡಿಗೆಗೆ ಪಡೆದಿದ್ದ ಅನುಪ್ ಮಲಿಕ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅನುಪ್ ಮಲಿಕ್ 2016ರಲ್ಲಿ ಕಣ್ಣೂರಿನಲ್ಲಿ ನಡೆದ ಪೋಡಿಕುಂಡ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. ಮೃತ ವ್ಯಕ್ತಿ ಅನುಪ್ ಮಲಿಕ್ ಜೊತೆ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.