ಕೊರೊನಾ ನಂತರ ಮಕ್ಕಳಲ್ಲಿ ಅಂಧತ್ವ ಸಮಸ್ಯೆ ಹೆಚ್ಚಿದೆ: ಡಾ. ಕೃಷ್ಣ ಪ್ರಸಾದ್
ಬ್ರಹ್ಮಾವರ ಎಸ್.ಎಂ.ಎಸ್. ಸಮುದಾಯ ಭವನದಲ್ಲಿ ಗೋವಿಂದರಾಜ್ ಹೆಗ್ಡೆ ನೇತೃತ್ವದಲ್ಲಿ ಅ.24 ರಂದು ಬ್ರಹ್ಮಾವರ ಫೌಂಡೇಶನ್, ಬ್ರಹ್ಮಾವರ-ಬಾರ್ಕೂರು ಲಯನ್ಸ್ & ಲಿಯೋ ಕ್ಲಬ್, ಬ್ರಹ್ಮಾವರ ಅಭಿವೃದ್ಧಿ ಸಮಿತಿ ಇವರ ಸಹಭಾಗಿತ್ವದಲ್ಲಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಮೊದಲು ಕಣ್ಣಿನ ಸಮಸ್ಯೆಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಲಭಿಸದೆ ರೋಗಿಗಳು ತೊಂದರೆ ಅನುಭವಿಸುತ್ತಿದ್ದರು. ವೈದ್ಯರ ಪ್ರಯತ್ನದಿಂದ ರಾಜ್ಯದಲ್ಲಿ ದೃಷ್ಟಿ ನೀತಿ ಮಸೂದೆಯನ್ನು ಜಾರಿಗೊಳಿಸಲಾಗಿದೆ. ಕಣ್ಣಿನ ವಿಷಯದಲ್ಲಿ ಪ್ರಸ್ತುತ ಶೇ.90 ರಷ್ಟು ಚಿಕಿತ್ಸೆ ಲಭಿಸುತ್ತಿದೆ. ಪ್ರಸಾದ್ ನೇತ್ರಾಲಯದಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಭಾರತದ ಅತ್ಯುತ್ತಮ ಇಪ್ಪತ್ತು ಕಣ್ಣಾಸ್ಪತ್ರೆಗಳಲ್ಲಿ ಪ್ರಸಾದ್ ನೇತ್ರಾಲಯ ಒಂದು. ದೇಶದ ವಿವಿಧೆಡೆಗಳಿಂದ ನೇತ್ರ ವೈದ್ಯರು ಇಲ್ಲಿಗೆ ಬಂದು ತರಬೇತಿ ಪಡೆದು ತೆರಳುತ್ತಾರೆ ಎಂದರು.
ಉದ್ಘಾಟಕರಾಗಿ ಭಾಗವಹಿಸಿದ್ದ ಲಿಟ್ಲರಾಕ್ ಇಂಡಿಯನ್ ಸ್ಕೂಲ್ ನಿರ್ದೇಶಕ ಮ್ಯಾಥ್ಯೂ ಸಿ.ನೈನಾನ್ ಮಾತನಾಡಿ ವಾಹನಗಳ ಚಾಲನೆ ಮಾಡುವ ಚಾಲಕರು ಕಣ್ಣಿನ ಚಿಕಿತ್ಸೆಯನ್ನು ತಪ್ಪದೇ ಮಾಡಿಕೊಳ್ಳಬೇಕು. ಬ್ರಹ್ಮಾವರ ಫೌಂಡೇಶನ್ ಉತ್ತಮ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದರು.
ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಡಾ. ಅಜಿತ್ ಕುಮಾರ್ ಶೆಟ್ಟಿ ಮಾತನಾಡಿ, ಕಣ್ಣಿನ ವಿಷಯದಲ್ಲಿ ನಿರ್ಲಕ್ಷ್ಯ ಸರಿಯಲ್ಲ. ಸಾರ್ವಜನಿಕರಿಗಾಗಿ ಆಯೋಜಕರು ಕಷ್ಟಪಟ್ಟು ಮಾಡುವ ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲರಿಗೂ ಉತ್ತಮ ನೇತ್ರ ಚಿಕಿತ್ಸೆ ದೊರಕಿಸಲು ಕೇಂದ್ರ ಸರ್ಕಾರ 1976 ರಲ್ಲೇ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. 2022 ರಲ್ಲಿ ಕೇಂದ್ರ ಸರ್ಕಾರ ಪೊರೆ ಮುಕ್ತ ಕಣ್ಣು ಅಭಿಯಾನ ಆರಂಭಿಸಿದೆ. ಕರ್ನಾಟಕ ಸರ್ಕಾರ ಆಶಾಕಿರಣ ಎಂಬ ಕಾರ್ಯಕ್ರಮ ಪರಿಚಯಿಸಿದೆ ಎಂದು ವಿವರಿಸಿದರು.
ಬ್ರಹ್ಮಾವರ ಫೌಂಡೇಶನ್ ಪ್ರವರ್ತಕ ಗೋವಿಂದರಾಜ್ ಹೆಗ್ಡೆ ಮಾತನಾಡಿ, ಬ್ರಹ್ಮಾವರ ಫೌಂಡೇಶನ್ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾರ್ಥಿ ವೇತನ, ರೋಗಿಗಳಿಗೆ ಸಹಾಯ ಮಾಡುವುದು, ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ಸಂಬಂದಿತ ಕಾರ್ಯಕ್ರಮಗಳು ನಡೆಸುತ್ತಾ ಬಂದಿದ್ದೇವೆ. ಇಂದು ಕಣ್ಣಿನ ತಪಾಸಣೆ ನಡೆಸಿ ಅಗತ್ಯ ಉಳ್ಳವರಿಗೆ ಉಚಿತವಾಗಿ ಕನ್ನಡಕವನ್ನು ನೀಡಲಿದ್ದೇವೆ. ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನೀಡಲಾಗುವುದು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಉಡುಪಿಯ ಪ್ರಸಾದ್ ನೇತ್ರಾಲಯ, ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿ, ಮರುದಿನ ಕರೆದು ತಂದು ಬಿಡಲಾಗುವುದು ಎಂದರು.
ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಹೆಗ್ಡೆ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ, ವಿನಯ್, ಜೇಮ್ಸ್ ಡಿಸಿಲ್ವಾ ಉಪಸ್ಥಿತರಿದ್ದರು.
ಮಳೆಯಿಂದ ಮನೆಗೆ ಹಾನಿಗೊಳಗಾದ ಆರ್ಥಿಕ ಅಶಕ್ತರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಚೇತನ್ ಜಿ. ಪೂಜಾರಿ ವಂದಿಸಿ, ಶರತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಪ್ರಸಾದ್ ನೇತ್ರಾಲಯದ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿಗಳು ತಪಾಸಣೆಯಲ್ಲಿ ಭಾಗಿಯಾದರು. ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಸದಸ್ಯರು ಸಹಕರಿಸಿದರು. ಶಿಬಿರದಲ್ಲಿ 528ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. 292 ಮಂದಿ ಉಚಿತ ಕನ್ನಡಕಕ್ಕೆ ಹಾಗೂ 78 ಮಂದಿ ಕಣ್ಣಿನ ಪೊರೆ ಚಿಕಿತ್ಸೆಗೆ ನೊಂದಾಯಿಸಿಕೊಂಡರು.