‘ಯಶಸ್ಸು ಅಡೆತಡೆಗಳ ಹಾದಿ’ ಪ್ರತಿ ಅಡೆತಡೆ ನಮ್ಮನ್ನು ಬಲಿಷ್ಠರನ್ನಾಗಿತ್ತದೆ: ಡಾ. ಸುಹಾಸ್ ಮುರಳಿ
Sunday, August 24, 2025
ಮಂಗಳೂರು: ‘ಯಶಸ್ಸು ಅಡೆತಡೆಗಳ ಹಾದಿ’ ಪ್ರತಿ ಅಡೆತಡೆ ನಮ್ಮನ್ನು ಬಲಿಷ್ಠರನ್ನಾಗಿತ್ತದೆ. ವಿಫಲತೆ ಬಂದರೆ ಅದು ಅಂತ್ಯ ಅಲ್ಲ, ಅದು ಯಶಸ್ಸಿನತ್ತ ಕರೆದೊಯ್ಯುವ ಹೆಜ್ಜೆ ಎಂದು ಖ್ಯಾತ ನರರೋಗ ತಜ್ಞ ಡಾ. ಸುಹಾಸ್ ಮುರಳಿ ಹೇಳಿದರು.
ಅವರು ಇಂದು ನಗರದ ಕೋಡಿಯಲ್‌ಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ‘ಎಜುಪಾತ್’ ವೃತ್ತಿ ಮಾರ್ಗದರ್ಶನ ಸರಣಿ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ, ‘ವೃತ್ತಿ ಮಾರ್ಗದರ್ಶನ ಎಜುಪಾತ್’ ಸರಣಿಯಲ್ಲಿ ‘ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ’ ಎಂಬ ವಿಷಯದ ಕುರಿತು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಅಧ್ಯಯನ ಅತ್ಯಗತ್ಯ. ಕೇವಲ ಎಂಬಿಬಿಎಸ್ ಮಾತ್ರ ನಮ್ಮ ಗುರಿಯಾಗಿರದೆ, ಆ ಕ್ಷೇತ್ರದಲ್ಲಿ ಮುಂದುವರಿಯಲು ನಿರಂತರ ಕಲಿಕೆ ಅಗತ್ಯ. ಯಶಸ್ಸಿನ ಪಯಣದಲ್ಲಿ ನಾವು ನಮ್ಮ ಗುರುಗಳನ್ನು ಮತ್ತು ನಮ್ಮ ಅನುಭವಗಳನ್ನು ಯಾವತ್ತೂ ಮರೆಯಬಾರದು. ವೈದ್ಯರಾಗುವುದು ಕೇವಲ ಹಣಗಳಿಕೆಗಾಗಿ ಎಂಬ ಉದ್ದೇಶವಿರದೆ ಈ ವೃತ್ತಿ ಹಲವಾರು ಜನರ ಪ್ರಾಣ ಹಾಗೂ ಹಲವರ ಬದುಕು ಬದಲಾಯಿಸುವ ಮಹಾನ್ ಪುಣ್ಯದ ಕೆಲಸ ಎಂದು ತಿಳಿಸಿದರು.
‘ವೃತ್ತಿ ಮಾರ್ಗದರ್ಶನ ಎಜುಪಾತ್’ ಸರಣಿಯಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ‘ಇಂಜಿನಿಯರ್ ಆಗಲು ಬೇಕಾಗುವ ಕೌಶಲ್ಯಗಳು’ ಎಂಬ ವಿಷಯದ ಕುರಿತು ಮಾತನಾಡಿ, ಇಂಜಿನಿಯರಿಂಗ್ ಕ್ಷೇತ್ರವು ಹೊಸ ತಂತ್ರಜ್ಞಾನಗಳೊಂದಿಗೆ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಯಶಸ್ವಿ ಇಂಜಿನಿಯರ್ ಆಗಲು ಕೆಲವೊಂದು ತಾಂತ್ರಿಕ ಮತ್ತು ವೈಯಕ್ತಿಕ ಕೌಶಲ್ಯಗಳ ಸಂಯೋಜನೆ ಅತ್ಯಗತ್ಯ. ತಾಂತ್ರಿಕ ಕೌಶಲ್ಯ, ಸಂವಹನಾ ಕೌಶಲ್ಯ, ಸಮಸ್ಯೆ ಪರಿಹಾರಾ ಕೌಶಲ್ಯ, ಹೊಸ ಆಲೋಚನೆಯನ್ನು ಸ್ವೀಕರಿಸುವ ಮುಕ್ತ ಮನಸ್ಸು ಇವೆಲ್ಲಾ ಒಬ್ಬ ಇಂಜಿನಿಯರ್‌ಗೆ ಇರಬೇಕಾದ ಮುಖ್ಯ ಕೌಶಲ್ಯಗಳು. ವಿಜ್ಞಾನ, ತಂತ್ರಜ್ಞಾನದ ಮೂಲಕ ಸಮಾಜದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇಂಜಿನಿಯರಿಂಗ್ ಕ್ಷೇತ್ರವು ಜಗತ್ತಿಗೆ ಹೊಸ ಸಾಧ್ಯತೆಯ ದಾರಿ ತೋರಿಸಿ ಕೊಟ್ಟಿದೆ ಎಂದು ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕ್ಷೇತ್ರದ ಕುರಿತು ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರಭಟ್ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ ಅಹನಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.







