
ಧರ್ಮಸ್ಥಳ ಪ್ರಕರಣ: 13ನೇ ಸ್ಥಳದ ರಹಸ್ಯ ಬಯಲು ಸಿಕ್ಕಿದ್ದು ಬರೇ ನೀರು
ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ಇಂದು ಬಾಕಿ ಇರುವ 13ನೇ ಸ್ಥಳದಲ್ಲಿ ಡ್ರೋನ್ ಜಿಪಿಆರ್ ಬಳಸಿ ಸ್ಕ್ಯಾನಿಂಗ್ ಕಾರ್ಯಾಚರಣೆ ನಡೆಸಿದ ಬಳಿಕ ಅದೇ ಸ್ಥಳದಲ್ಲಿ ಹಿಟಾಚಿ ಬಳಸಿ ನೆಲವನ್ನು ಅಗೆದರೂ ಕಳೇಬರದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.
ಫಲಿತಾಂಶ ಶೂನ್ಯ:..
13ನೇ ಸ್ಥಳದ ವ್ಯಾಪ್ತಿಯ ಸುಮಾರು 300 ಮೀಟರ್ ಪ್ರದೇಶವನ್ನು ಜಿಪಿಆರ್ ಯಂತ್ರದಿಂದ ಸ್ಕ್ಯಾನ್ ಮಾಡಲಾಗಿತ್ತು. ಆದರೆ, ಯಂತ್ರವು ಕಳೇಬರದ ಅವಶೇಷಗಳ ಬಗ್ಗೆ ಸುಳಿವು ನೀಡಿಲ್ಲ. ತಾಂತ್ರಿಕವಾಗಿ ಯಾವುದೇ ನಿರ್ದಿಷ್ಟ ಪತ್ತೆ ಸಿಗದಿದ್ದರೂ, ಎಸ್‌ಐಟಿ ತಂಡವು ಅನಾಮಿಕ ದೂರುದಾರನ ಹೇಳಿಕೆಯ ಆಧಾರದ ಮೇಲೆ ಅಗೆತ ಕಾರ್ಯಕ್ಕೆ ಮುಂದಾದರೂ ಫಲಿತಾಂಶ ಶೂನ್ಯ. ಎರಡು ಹಿಟಾಚಿಗಳಲ್ಲಿ 14 ಅಡಿ ಆಳ ಗುಂಡಿ ಅಗೆಯಲಾಗಿದೆ.
ಸಿಕ್ಕಿದ್ದು ನೀರು..
ದೂರುದಾರ ಸೂಚಿಸಿದ ಸ್ಥಳವನ್ನು 14 ಅಡಿ ಅಗೆದರೂ ಕಳೇಬರದ ಅವಶೇಷಗಳು ಸಿಗದೆ ಬರೇ ನೀರು ಮಾತ್ರ ಸಿಕ್ಕಿದೆ. ನೀರನ್ನು ಮೋಟಾರು ಯಂತ್ರ ಬಳಸಿ ನದಿಗೆ ಹರಿಸಲಾಗುತ್ತಿದೆ. ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಗುಂಡಿಯನ್ನು ಮುಚ್ಚಲಾಗಿದೆ.
ಸ್ಥಳಕ್ಕೆ ಎಸ್‌ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಬಳಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮರಳಿದ್ದಾರೆ. ಎಸ್‌ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ,ಪುತ್ತೂರು ಸಹಾಯಕ ಆಯಕ್ತ ಸ್ಟೆಲ್ಲಾ ವರ್ಗೀಸ್ ಹಾಗೂ ಇತರ ತಜ್ಞ ಅಧಿಕಾರಿಗಳ ಸುಮಾರು 60 ಮಂದಿಯ ತಂಡ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದೆ.
ಮುಂದೇನು..
ಅನಾಮಿಕ ಸಾಕ್ಷಿ ದೂರುದಾರ ಗುರುತಿಸಿದ 16 ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ನಡೆದಿದೆ. ಎರಡು ಕಡೆ ಮಾತ್ರ ಪುರುಷನದ್ದು ಎನ್ನಲಾದ ಎರಡು ಕಳೇಬರದ ಅವಶೇಷಗಳು ಪತ್ತೆಯಾಗಿದೆ. ಬಾಕಿ ಇದ್ದ 13ನೇ ಸ್ಥಳದಲ್ಲಿ ಇಂದು ಶೋಧ ನಡೆದಿದೆ. ಮುಂದಿನ ಕಾರ್ಯಾಚರಣೆ ಬಗ್ಗೆ ಎಸ್‌ಐಟಿ ಯಾವುದೇ ಮಾಹಿತಿ ನೀಡಿಲ್ಲ. ಅನಾಮಿಕ ಸಾಕ್ಷಿ ದೂರುದಾರ ಇನ್ನಷ್ಟು ಸ್ಥಳಗಳನ್ನು ಗುರುತಿಸಿದರೆ ಆ ಸ್ಥಳದ ಮಹಜರು ನಡೆದು ಶೋಧ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆಗಳಿವೆ.
ಅನುಮಾನ..
ಇಷ್ಟೆಲ್ಲಾ ಕಾರ್ಯಾಚರಣೆ ನಡೆದರೂ ಅನಾಮಿಕ ದೂರುದಾರ ಹೇಳಿದಂತೆ ನೂರಾರು ಮೃತದೇಹಗಳ ಆಸ್ಥಿಪಂಜರ ಪತ್ತಯಾಗಿಲ್ಲದ್ದ ಕಾರಣ ಇದೀಗ ಅನಾಮಿಕ ದೂರುದಾರನತ್ತ ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಶ್ರೀ ಕ್ಷೇತ್ರದ ಹೆಸರು ಕೆಡಿಸುವ ಷಡ್ಯಂತ್ರ ಎಂಬ ಟೀಕೆ, ಆರೋಪಗಳು ವ್ಯಕ್ತವಾಗುತ್ತಿದೆ.