ಧರ್ಮಸ್ಥಳ, ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರಕ್ಕೆ ಖಂಡನೆ: ಆ.22ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ
ಸೋಮವಾರ ಮಂಗಳೂರು ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಮಂಗಳೂರು ಜೈನ ಶ್ರಾವಕರ ತುರ್ತು ಸಭೆಯಲ್ಲಿ ಮಾತನಾಡಿದ ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ವೀರ್ ಸುದರ್ಶನ್ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳವು ಹಿಂದೂ-ಜೈನ ಧರ್ಮದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲಾ ಧರ್ಮ ಹಾಗೂ ವರ್ಗಗಳ ಶ್ರೇಯಾ ಅಭಿವೃದ್ಧಿಗಾಗಿ ಕಳೆದ ಐದು ದಶಕಗಳಿಂದ ಕ್ಷೇತ್ರದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ತಮ್ಮದೇ ಆದ ಕಾರ್ಯಶೈಲಿಯಲ್ಲಿ ವಿಶೇಷ ಯೋಜನೆಗಳ ಮೂಲಕ ಮನುಕುಲದ ಶ್ರೇಯಸ್ಸಿಗಾಗಿ ದುಡಿದು ವಿಶ್ವಮಾನ್ಯರಾದವರು. ಪೂಜ್ಯ ಹೆಗ್ಗಡೆಯವರ ಚಿಂತನೆ, ಖ್ಯಾತಿ ಹಾಗೂ ಅವರಿಗೆ ಸಲ್ಲುತ್ತಿರುವ ಮನ್ನಣೆ ಇವೆಲ್ಲವನ್ನು ಸಹಿಸದ ಕೆಲವ್ಯಕ್ತಿಗಳ ಗುಂಪೊಂದು ಇವರ ಮೇಲೆ ಇಲ್ಲಸಲ್ಲದ ಅಪಪ್ರಚಾರ, ಆಧಾರ ರಹಿತ ಆರೋಪ, ಜೈನಧರ್ಮದ ಪರಂಪರೆ ಮತ್ತು ಮುನಿಗಳ ಬಗ್ಗೆ ಅವಹೇಳನನಕಾರಿ ಆರೋಪ ಹಾಗೂ ಕೆಟ್ಟ ಪ್ರಚೋದನೆ ನೀಡುವಂತಹ ಹೇಳಿಕೆಗಳನ್ನು ನೀಡಿ ಭಯ ಆತಂಕವನ್ನುಂಟು ಮಾಡುತ್ತಿದೆ. ಇದಲ್ಲದೆ ಎಸ್ಐಟಿ ತನಿಖಾ ತಂಡವು ತನಿಖೆಯನ್ನು ಮಾಡುತ್ತಿರುವ ಈ ಸಂದರ್ಭದಲ್ಲೂ ಸುಳ್ಳು ಮಾಹಿತಿಗಳನ್ನು ನಿರಂತರವಾಗಿ ಕೆಲವು ವ್ಯಕ್ತಿಗಳು ಹರಡಿಸುತ್ತಿದ್ದಾರೆ ಎಂದರು.
ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ:
ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ನೇರವಾಗಿ ಅವಲೋಕಿಸಿ ಜನರನ್ನು ದಿಕ್ಕು ತಪ್ಪಿಸುವ ಸಂದೇಶಗಳಿಗೆ ಕಡಿವಾಣ ಹಾಕಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹಾಗೂ ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬದ ಘನತೆ ಗೌರವ ಕಾಪಾಡಬೇಕು. ಮಾತ್ರವಲ್ಲ ಸಮಾಜದ ಸಾಮರಸ್ಯವನ್ನು ಕದಡಿ ಸಮಾಜವನ್ನು ಒಡೆಯುವ ಈ ದೊಡ್ಡ ಸಂಚಿನ ಹಿಂದೆ ಕೆಲಸ ಮಾಡುತ್ತಿರುವವರ ಮೇಲೆ ಹಾಗೂ ಸುಳ್ಳು ದೂರುದಾರರ ಮೇಲೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ವೀರ್ ಸುದರ್ಶನ್ ಜೈನ್ ಆಗ್ರಹಿಸಿದರು.
ಭಾರತೀಯ ಜೈನ್ ಮಿಲನ್ ಪ್ರಮುಖರಾದ ದಿಲೀಪ್ ಜೈನ್, ರತ್ನಾಕರ ಜೈನ್, ಸುರೇಶ್ ಬಳ್ಳಾಲ್, ಕೆ ರಾಜವರ್ಮ ಬಳ್ಳಾಲ್, ಪುಷ್ಪರಾಜ್ ಜೈನ್, ದರ್ಶನ್ ಜೈನ್, ಪ್ರೊ. ರಾಜೇಂದ್ರ ಶೆಟ್ಟಿ, ಮಂಗಳೂರು ಜೈನ ಸಮಾಜದ ಹಿರಿಯ ಶ್ರಾವಕ- ಶ್ರಾವಕಿಯರು ಉಪಸ್ಥಿತರಿದ್ದರು. ಭಾರತೀಯ ಜೈನ್ ಮಿಲನ್ ಮಂಗಳೂರು ಕೋಶಾಧಿಕಾರಿ ಪ್ರೀಯಾ ಸುದೇಶ್ ಕಾರ್ಯಕ್ರಮ ನಿರೂಪಿಸಿದರು.
ಆ.22ರಂದು ಬೃಹತ್ ಪ್ರತಿಭಟನಾ ಸಭೆ:
ಭಾರತೀಯ ಜೈನ್ ಮಿಲನ್ ಮಂಗಳೂರು ಖಂಡನಾ ನಿರ್ಣಯ ಸಭೆಯ ಬಳಿಕ ಮಂಗಳೂರಿನ ಸರ್ವ ಸಮಾಜಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಆ.22ರ ಶುಕ್ರವಾರದಂದು ಧರ್ಮಸ್ಥಳ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ಅವಹೇಳನ, ಅಪಪ್ರಚಾರಗಳ ವಿರುದ್ಧ ಬೃಹತ್ ಪ್ರತಿಭಟನಾ ಸಭೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವಾ, ವಿಎಚ್ಪಿ ಮುಖಂಡರಾದ ಪ್ರೊ. ಎಂಬಿ ಪುರಾಣಿಕ್ ಹಾಗೂ ಎಚ್ಕೆ ಪುರುಷೋತ್ತಮ, ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ ನಾಕ್ ಹಾಗೂ ಸಲಹೆಗಾರ ರಮೇಶ್ ಕೆ., ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಜಿತೇಂದ್ರ ಕೊಟ್ಟಾರಿ, ದಯಾನಂದ ಕತ್ತಲ್ಸರ್, ಅಜಿತ್ಕುಮಾರ್ ಮಾಲಾಡಿ, ನಾಗೇಂದ್ರ, ಉದಯ ಪೂಜಾರಿ ಬಳ್ಳಾಲ್ಬಾಗ್, ನಾಗರಾಜ್ ಶೆಟ್ಟಿ, ಸಂತೋಷ್ ಕುಮಾರ್ ಬೋಳಿಯಾರ್ ಸೇರಿದಂತೆ ಹಲವರಿದ್ದರು.