ಮಧ್ಯಪ್ರದೇಶ ಮಾದರಿಯಲ್ಲಿ ಆಯುಷ್ಯ ವೈದ್ಯಾಧಿಕಾರಿ ಹುದ್ದೆ ಸೃಜಿಸಿ: ಕಿಶೋರ್ ಕುಮಾರ್ ಪುತ್ತೂರು
ಕರ್ನಾಟಕದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಬೆರಳೆಣಿಕೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವೈದ್ಯರಿದ್ದಾರೆ. ಉಳಿದಂತೆ ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವೈದ್ಯರಿಲ್ಲ.
2014ರಿಂದಲೇ ಕೇಂದ್ರ ಸರ್ಕಾರ ಆಯುಷ್ ಚಿಕಿತ್ಸಾ ಪದ್ಧತಿಗೆ ಒತ್ತು ನೀಡುತ್ತಿದೆ. ಇದಕ್ಕೆ ಪೂರಕವಾಗಿ ಆಯುಷ್ ವೈದ್ಯಪದ್ಧತಿ ಹಾಗೂ ಚಿಕಿತ್ಸೆಯನ್ನು ಪ್ರಚುರ ಪಡಿಸಬೇಕಾದ ಅಗತ್ಯವಿದೆ.
ಕರ್ನಾಟಕದಲ್ಲಿ 155 ಆಯುಷ್ ಆಸ್ಪತ್ರೆಗಳಿವೆ 95 ಆಯುರ್ವೇದ ಕಾಲೇಜುಗಳಿವೆ. ಈ ಕಾಲೇಜುಗಳಿಂದ ಪ್ರತಿವರ್ಷ ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬಿಎಎಂಎಸ್ ಪದವಿ ಪಡೆದು ಹೊರಬರುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ಸೂಕ್ತ ಉದ್ಯೋಗ ಇಲ್ಲದೆ ಕಷ್ಟಪಡುವಂತಾಗಿದೆ.
ಕರ್ನಾಟಕ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವಿವಿಧ ಹುದ್ದೆಗಳಿಗೆ 2020ರಲ್ಲಿ ನೇಮಕಾತಿ ನಡೆಸಲಾಗಿದೆ. ಇದನ್ನು ಹೊರತುಪಡಿಸಿದರೆ ಕಳೆದ ಮೂರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಗೆ ಯಾವುದೇ ನೇಮಕಾತಿ ನಡೆದಿಲ್ಲ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಹಾಲಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅತ್ಯವಶ್ಯಕವಾಗಿ ಆಯುಷ್ ವೈದ್ಯರ ಹುದ್ದೆಯನ್ನು ಮಧ್ಯಪ್ರದೇಶ ಮಾದರಿಯಲ್ಲಿ ಸೃಜಿಸಿ, ಭರ್ತಿಗೊಳಿಸಲು ಆದ್ಯತೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ಆರೋಗ್ಯ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.