ಧರ್ಮಸ್ಥಳ ಪ್ರಕರಣ: ಅನಾಮಿಕ ದೂರುದಾರನ ವಶಕ್ಕೆ ಪಡೆಯಲು ಚಿಂತನೆ

ಧರ್ಮಸ್ಥಳ ಪ್ರಕರಣ: ಅನಾಮಿಕ ದೂರುದಾರನ ವಶಕ್ಕೆ ಪಡೆಯಲು ಚಿಂತನೆ

ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ದೂರು ನೀಡಿದ ಅನಾಮಿಕ ಮುಸುಕುಧಾರಿ ವ್ಯಕ್ತಿಯನ್ನು ವಿಶೇಷ ತನಿಖಾ ದಳ  (ಎಸ್‌ಐಟಿ) ವಶಕ್ಕೆ ಪಡೆಯಲು ಚಿಂತನೆ ನಡೆಸಿದೆ ಎನ್ನಲಾಗಿದೆ. 

ಎಸ್‌ಐಟಿ ಅನಾಮಿಕನನ್ನು ವಿಚಾರಣೆ ನಡೆಸಿದೆ ಎನ್ನಲಾಗಿದ್ದು, ಆತ ನೀಡಿದ  ದೂರಿನ ಮೇಲೆಯೇ ಅನುಮಾನ ವ್ಯಕ್ತವಾದ ಕಾರಣ ಆತನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಆತನನ್ನು ಸುಪರ್ದಿಗೆ ಪಡೆದು ವಿಚಾರಣೆಗೆ ಒಳಪಡಿಸಿದರೆ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆ ಇರುವುದರಿಂದ ಈ ಕ್ರಮಕ್ಕೆ ಎಸ್‌ಐಟಿ ಮುಂದಾಗಿದೆ ಎನ್ನಲಾಗಿದೆ. ಆದರೆ, ದೂರುದಾರ ಸಾಕ್ಷ್ಯವೂ ಆಗಿರುವುದರಿಂದ ಆತನನ್ನು ವಶಕ್ಕೆ ಪಡೆಯಲು ಕಾನೂನು ತೊಡಕು ಎದುರಾಗಿದೆ.

ಕಾನೂನು ತೊಡಕು..

ಅನಾಮಿಕ ದೂರುದಾರನನ್ನು ಸದ್ಯದ ಮಟ್ಟಿಗೆ ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಹೀಗಾಗಿ, ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಆತ ರಕ್ಷಣೆಯಲ್ಲಿದ್ದಾನೆ. ಇದರಿಂದಾಗಿ ಆತನನ್ನು ವಶಕ್ಕೆ ಪಡೆಯುವುದು ಅಥವಾ ಬಂಧಿಸುವುದು ಸಾಧ್ಯವಿಲ್ಲ.

ಆದಾಗ್ಯೂ, ಕೆಲವು ಪ್ರಬಲ ವಿಚಾರಗಳನ್ನು ಮುಂದಿಟ್ಟುಕೊಂಡು ಆತನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಉದ್ದೇಶಿಸಿದೆ ಎನ್ನಲಾಗಿದೆ. ಕೆಲ ಪ್ರಬಲ ಸಾಕ್ಷ್ಯಗಳ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಎಸ್‌ಐಟಿ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ದಾರಿ ತಪ್ಪಿಸುವ ಯತ್ನ..

ಅನಾಮಿಕ ದೂರುದಾರ ಎಸ್‌ಐಟಿ ಮುಂದೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಪ್ರಕರಣವನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಬಂಗ್ಲೆಗುಡ್ಡ, ಕಲ್ಲೇರಿ, ಬೋಳಿಯಾರು ಎಂದು ಸ್ಥಳಗಳ ಕುರಿತು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಈತ ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಮತ್ತೆ ಶೋಧ..?

ಸದ್ಯ ಧರ್ಮಸ್ಥಳದ ವಿವಿಧೆಡೆ ಅಗೆದಿರುವ ಮಣ್ಣು ಮತ್ತು ಸಿಕ್ಕಿರುವ ಅಸ್ಥಿಪಂಜರದ ಕುರುಹುಗಳನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ವರದಿ ಬಂದ ಬಳಿಕ ತನಿಖೆ ಚುರುಕುಗೊಳ್ಳಳಲಿದ್ದು, ಮತ್ತೆ ಎರಡ್ಮೂರು ಕಡೆ ಶೋಧ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಾರಾಂತ್ಯದಲ್ಲೇ ಎಫ್‌ಎಸ್‌ಎಲ್ ವರದಿ ಎಸ್‌ಐಟಿ ಕೈಸೇರುವ ಸಾಧ್ಯತೆ ಇದೆ.

ಸುಳ್ಳು ಪೋಟೊ..

ಧರ್ಮಸ್ಥಳದಲ್ಲಿ ತನ್ನ ಪುತ್ರಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸುಜಾತ ಭಟ್ ಸಾಕ್ಷ್ಯಕ್ಕಾಗಿ ಸುಳ್ಳು ಫೋಟೋ ಬಿಡುಗಡೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿಂತೆ ಇಲ್ಲಿಯ ತನಕ ಯಾವುದೇ ದಾಖಲೆಯನ್ನು ಸುಜಾತಾ ಭಟ್ ಬಿಡುಗಡೆ ಮಾಡಿರಲಿಲ್ಲ. ಕೊನೆಗೆ ಯಾವುದಾದರೂ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್ ಫೋಟೋ ಬಿಡುಗಡೆ ಮಾಡಿದ್ದರು. ಆದರೆ ಬಿಡುಗಡೆ ಮಾಡಿರುವ ಪೋಟೊ ಮೃತರಾಗಿರುವ ಶಿವಮೊಗ್ಗದ ವಾಸಂತಿಯವರದ್ದು ಎನ್ನಲಾಗಿದೆ.

279 ಶವ..

ಧರ್ಮಸ್ಥಳ ಪರಿಸರದಲ್ಲಿ ಶವಗಳನ್ನು ಹೂಳಲಾಗಿರುವ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಮಾಹಿತಿ ಬಹಿರಂಗವಾಗಿದೆ. 1987 ರಿಂದ 2025 ರ ಅವಧಿಯಲ್ಲಿ ಧರ್ಮಸ್ಥಳ ಆಸುಪಾಸಿನಲ್ಲಿ ಶಿಶುಗಳದ್ದೂ ಸೇರಿದಂತೆ 279 ಶವಗಳನ್ನು ಹೂಳಲಾಗಿದೆ. ಇವುಗಳಲ್ಲಿ ಹೆಚ್ಚಿನವು ಆತ್ಮಹತ್ಯೆ ಪ್ರಕರಣಗಳು ಎಂದು ಆರ್‌ಟಿಐ ಮಾಹಿತಿ ತಿಳಿಸಿದೆ. 219 ಪುರುಷರ ಶವಗಳು ಮತ್ತು 46 ಮಹಿಳೆಯರ ಶವಗಳಾಗಿವೆ. ಶಿಶುಗಳದ್ದು ಸೇರಿದಂತೆ 14 ಶವಗಳ ಲಿಂಗವನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಧರ್ಮಸ್ಥಳ ಗ್ರಾಮ ಪಂಚಾಯತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಅವರಿಂದ ಆರ್‌ಟಿಐ  ಅಡಿಯಲ್ಲಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article