‘ಮಾಸ್ಕ್ಮ್ಯಾನ್ಗೆ ಫಜೀತಿ ತಂದ ಬುರುಡೆ’: ಧರ್ಮಸ್ಥಳಕ್ಕೂ ಮುನ್ನವೇ ದೆಹಲಿಗೆ ಹೋಗಿದ್ದ ಬುರುಡೆ
ಚಿನ್ನಯ್ಯನನ್ನು ಬಂಧಿಸುವ ಮುನ್ನ ಎಸ್ಐಟಿ ನಿರಂತರವಾಗಿ 19 ಗಂಟೆಗಳ ಕಾಲ ಆತನನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ತಾನು ಮೊದಲಿಗೆ ತಂದಿದ್ದ ತಲೆ ಬುರುಡೆಯನ್ನು ಎಲ್ಲಿಂದ ತರಲಾಗಿತ್ತು ಎಂಬುದನ್ನು ಚಿನ್ನಯ್ಯ ಬಾಯಿಬಿಟ್ಟಿಲ್ಲ. ಪೊಲೀಸರಿಗೆ ಹಾಗೂ ನ್ಯಾಯಾಲಯಕ್ಕೆ ಸುಳ್ಳು ದೂರು, ಸುಳ್ಳು ಮಾಹಿತಿ, ಸುಳ್ಳು ಸಾಕ್ಷ್ಯ ನೀಡುವುದು ಕೂಡ ಅಪರಾಧ. ಹೀಗಾಗಿ ಎಸ್ಐಟಿಯ ಪೊಲೀಸ್ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸುವ ತೀರ್ಮಾನ ಕೈಗೊಂಡಿದ್ದಾರೆ.
ಚಿನ್ನಯ್ಯ ದೂರು ನೀಡುವ ಆರಂಭದಲ್ಲಿ ತಂದಿದ್ದ ತಲೆ ಬುರುಡೆಯೇ ನಕಲಿ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನಯ್ಯನ ಬಂಧನವಾಗಿದೆ.
ದೆಹಲಿಗೆ..:
ಚಿನ್ನಯ್ಯ ತಂದಿದ್ದ ‘ಬುರುಡೆ ಧರ್ಮಸ್ಥಳ ನೋಡುವುದಕ್ಕೂ ಮುನ್ನವೇ ದೆಹಲಿ ನೋಡಿತ್ತು ಎನ್ನಲಾಗುತ್ತಿದೆ. ಧರ್ಮಸ್ಥಳದ ವಿರುದ್ಧ ಕೆಲಸ ಮಾಡುವ ತಂಡವೊಂದು ಚಿನ್ನಯ್ಯನ ಸಹಿತ ಬುರುಡೆಯನ್ನ ದೆಹಲಿಗೆ ತೆಗೆದುಕೊಂಡು ಹೋಗಿತ್ತು. ಅಲ್ಲಿ ಪ್ರತಿಷ್ಠಿತ ವ್ಯಕ್ತಿಗಳು, ಪ್ರಸಿದ್ಧ ನ್ಯಾಯವಾದಿಯನ್ನು ಭೇಟಿಯಾಗಿ ಬುರುಡೆಯನ್ನ ತೋರಿಸಲಾಗಿತ್ತು. ಬುರುಡೆ ಸಹಿತ ಇಡೀ ಪ್ರಕರಣದ ಕಥೆಯನ್ನು ಅಲ್ಲಿ ಹೇಳಲಾಗಿತ್ತು. ಈ ಸಂದರ್ಭ ಹಣಕಾಸಿನ ಡೀಲ್ ಕೂಡಾ ನಡೆದಿತ್ತು ಎನ್ನಲಾಗುತ್ತಿದೆ.
ಚೆನ್ನಯ್ಯ ಬುರುಡೆಯನ್ನು ಇಟ್ಟುಕೊಂಡು ನ್ಯಾಯಾಲಯದಿಂದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಭದ್ರತೆ ಪಡೆದುಕೊಂಡಿದ್ದ. ಹೀಗಾಗಿ ಎಸ್ಐಟಿ ಆತ ಹೇಳಿದ್ದ 17 ಜಾಗಗಳಲ್ಲಿ ಗುಂಡಿ ತೋಡಿದ ಬಳಿಕ ಮೂಲ ಬುರುಡೆಯ ಬಗ್ಗೆ ಪ್ರಶ್ನೆ ಮಾಡಿದೆ. ಈ ವೇಳೆ ಆತ ಒಂದೊಂದು ಜಾಗದ ಹೆಸರನ್ನು ಹೇಳಿದ್ದ. ಒಮ್ಮೆ ಬೋಳಿಯಾರ್ ಮತ್ತೊಮ್ಮೆ ಕಲ್ಲೇರಿ ಇನ್ನೊಮ್ಮೆ ಇನ್ಯಾವುದೋ ಜಾಗವನ್ನು ಹೇಳಿದ್ದ.
ಈ ನಡುವೆ ಬುರುಡೆಯಲ್ಲಿದ್ದ ಮಣ್ಣು ಧರ್ಮಸ್ಥಳ ಪರಿಸರದ್ದೇ ಅಲ್ಲ ಎಂಬುದು ವಿಧಿವಿಜ್ಞಾನ ಪ್ರಾಯೋಗಾಲಯದಲ್ಲಿ ದೃಢಪಟ್ಟಿತ್ತು. ಇದು ಖಚಿತವಾಗುತ್ತಿದ್ದಂತೆ ಎಸ್ಐಟಿ ಚೆನ್ನಯ್ಯನನ್ನು ತೀವ್ರವಾಗಿ ವಿಚಾರಿಸಿದೆ. ಆಗ ಆತ ಬೇರೆ ಜಾಗದಿಂದ ಈ ಬುರುಡೆ ತಂದಿದ್ದೇನೆ. ಬೇರೆಯವರು ಹೇಳಿದಂತೆ ನಾನು ಈ ಪ್ರಕರಣಕ್ಕೆ ಬಂದಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ. ಚೆನ್ನಯ್ಯ ಆರಂಭದಲ್ಲಿ 2 ಲಕ್ಷ ರೂ. ಹಣ ಪಡೆದಿದ್ದಾನೆ ಎನ್ನಲಾಗಿದೆ. 2023 ಡಿಸೆಂಬರ್ನಲ್ಲಿ ತಂಡವೊಂದು ಚಿನ್ನಯ್ಯನನ್ನ ಸಂಪರ್ಕ ಮಾಡಿತ್ತು. ಈ ವೇಳೆ ಅಕ್ರಮವಾಗಿ ಶವಗಳನ್ನ ಹೂತಿಟ್ಟಿರುವ ಬಗ್ಗೆ ತಪ್ಪು ಒಪ್ಪಿಗೆ ಕೊಡುವಂತೆ ಆ ತಂಡ ಚಿನ್ನಯ್ಯನೊಂದಿಗೆ ವ್ಯವಹಾರ ಕುದುರಿಸಿತ್ತು.