ತಿಮರೋಡಿಗೆ ಮತ್ತೊಂದು ನೋಟೀಸ್..?
ಮಂಗಳೂರು: ಬಿಜೆಪಿ ನಾಯಕ ಬಿ. ಎಲ್. ಸಂತೋಷ್ ನಿಂದನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಷರತ್ತು ಬದ್ಧ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಸೌಜನ್ಯ ಪರ ನ್ಯಾಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಬೆಳ್ತಂಗಡಿ ಪೊಲೀಸರು ಮತ್ತೊಂದು ನೋಟೀಸ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ಹೋದ ಬ್ರಹ್ಮವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ. ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ವಿಚಾರಣೆಗೆ ಹಾಜರಾಗಿರುವ ಗಿರೀಶ್ ಮಟ್ಟಣ್ಣನವರ್ ಹೇಳಿಕೆ ದಾಖಲಿಸಿದ್ದಾರೆ. ಇದೀಗ ಮಹೇಶ್ ಶೆಟ್ಟಿ ತಿಮರೋಡಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಮತ್ತೆ ಸೌಜನ್ಯ ಹೋರಾಟ..
ಮಾಸ್ಕ್‌ಮ್ಯಾನ್ ಚೆನ್ನಯ್ಯನ ಬಂಧನದೊಂದಿಗೆ ಇಡೀ ಪ್ರಕರಣದ ದಿಕ್ಕು ಬದಲಾಗಿದೆ. ಈ ನಡುವೆ ಬುರುಡೆ ಪ್ರಕರಣದಿಂದ ದೂರ ಉಳಿಯಲು ಬಯಸಿರುವ ತಿಮರೋಡಿ ತಂಡ ಸೌಜನ್ಯ ಪರ ನ್ಯಾಯ ಹೋರಾಟ ಮುಂದುವರೆಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಸೌಜನ್ಯ ಪ್ರಕರಣದ ಮೂಲಕ ಮಹೇಶ್ ಶೆಟ್ಟಿ ತಿಮರೋಡಿ ದೊಡ್ಡ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದರು. ಸೌಜನ್ಯ ಹೋರಾಟಕ್ಕೆ ರಾಜ್ಯದೆಲ್ಲಡೆಗಳಿಂದ ಬೆಂಬಲ ವ್ಯಕ್ತವಾಗಿತ್ತು. ನ್ಯಾಯಾಲಯದ ಕಾರಣದಿಂದ ಇತ್ತೀಚಿಗಿನ ದಿನಗಳಲ್ಲಿ ಈ ಹೋರಾಟದ ಸದ್ದು ಇರಲಿಲ್ಲ. ಇದೀಗ ಧರ್ಮಸ್ಥಳ ವಿರುದ್ಧದ ಬುರುಡೆ ಪ್ರಕರಣ ಕೂಡಾ ಠುಸ್ ಆಗಿದೆ. ಬುರುಡೆ ಪ್ರಕರಣದಿಂದ ಅಂತರ ಕಾಯ್ದುಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ತಂಡ ಇದೀಗ ತಮ್ಮ ಮೂಲ ಹೋರಾಟವಾಗಿರುವ ಸೌಜನ್ಯ ಹೋರಾಟವನ್ನೇ ಮುಂದುವರಿಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ.
ಹಲವರಿಗೆ ನಡುಕ..
ಚೆನ್ನಯ್ಯನನ್ನು ವಿಚಾರಿಸುತ್ತಿರುವ ಎಸ್‌ಐಟಿ ಮುಂದಿನ ದಿನಗಳಲ್ಲಿ ಹಲವರಿಗೆ ವಿಚಾರಣೆಗಾಗಿ ನೋಟೀಸ್ ಕಳುಹಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿಚಾರಣೆಯಲ್ಲಿ ಚೆನ್ನಯ್ಯ ಹೆಸರೇಳುವ ವ್ಯಕ್ತಿಗಳಿಗೆ ಇದೀಗ ನಡುಕ ಆರಂಭವಾಗಿದೆ.
ಎಸ್‌ಐಟಿ ಅಧಿಕಾರಿಗಳು ಸದ್ಯ ಚಿನ್ನಯ್ಯನ ಮೊಬೈಲ್ ನಂಬರ್ ಆಧಾರದ ಮೇಲೆ ಎರಡು ವರ್ಷದ ಸಿಡಿಆರ್ ಸಂಗ್ರಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಚಿನ್ನಯ್ಯ ಜತೆ ಫೋನ್ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಎದುರಾಗಿದೆ. ಆರೋಪಿ ಚಿನ್ನಯ್ಯ ಯಾಱರ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ್ದ, ಆತ ಎಲ್ಲೆಲ್ಲಿ ಕೆಲಸ ಮಾಡಿದ್ದ, ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಯುತ್ತಿದೆ.