ತುಳು ಭಾಷೆ ಎರಡನೇ ಅಧಿಕೃತ ಭಾಷೆಯಾಗಬೇಕು: ಎ.ಸಿ. ಭಂಡಾರಿ
Monday, August 18, 2025
ಮಂಗಳೂರು: ಇಂದು ದೇಶಾದ್ಯಂತ 1.5 ಕೋಟಿ ಜನ ತುಳು ಮಾತನಾಡುವವರಿದ್ದಾರೆ. ತುಳು ಭಾಷೆಯ ಮೇಲೆ ಅಭಿಮಾನ ಹೆಚ್ಚು ಇದೆ. ಆದುದರಿಂದ ತುಳು ಭಾಷೆ ಎರಡನೇ ಅಧಿಕೃತ ಭಾಷೆಯಾಗಬೇಕು ಎಂಬ ಆಶಯ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.
ಅವರು ಇಂದು ನಗರದ ಡಾ. ಪಿ. ದಯಾನಂದ ಪೈ.-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ತುಳು ವಿಭಾಗದ ಸಹಯೋಗದೊಂದಿಗೆ ಆಟಿ ತಿಂಗಳ ತುಳುವರ ಆಚರಣೆ-ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮಹತ್ವ ವಿಚಾರ ಸಂಕಿರಣ ಮತ್ತು ತುಳುನಾಡಿನ ಪಾರಂಪರಿಕ ವಸ್ತು ಹಾಗೂ ತಿನಿಸುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ತುಳು ಭಾಷೆ ಮಾತನಾಡುವುದು ಎಂದರೆ ನಾಚಿಕೆ ಮಾಡುತ್ತಿದ್ದರು. ಶಾಲೆಯಲ್ಲಿ ತುಳು ಮಾತನಾಡಿದರೆ ಬೇಂಚಿನ ಮೇಲೆ ನಿಲ್ಲಿಸುತ್ತಿದ್ದರು. ಯಾವುದಾದರೂ ಕಾರ್ಯಕ್ರಮಕ್ಕೆ ಹೋದರೆ ‘ತುಳು ಅಪ್ಪೆ ಜೋಕ್ಲು ಬತ್ತಾ’ ಎಂದು ಲೇವಡಿ ಮಾಡುತ್ತಿದ್ದರು. ಅದಾದ ನಂತರ ಇದರ ಹಿಂದೆ ಕಳೆದ 50 ವರ್ಷಗಳಿಂದ ಅನೇಕರು ಕೆಲಸ ಮಾಡಿದ ಪರಿಣಾಮ ಇಂದು ಜಾತಿ ಧರ್ಮವನ್ನು ಬಿಟ್ಟು ಎಲ್ಲರೂ ತುಳುವನ್ನು ಮಾತನಾಡುವ ಮಟ್ಟಕ್ಕೆ ಬೆಳೆದಿದೆ ಎಂದರು.
ಜಿಲ್ಲೆಯ 44 ಶಾಲೆಗಳಲ್ಲಿ ತುಳು ಭಾಷೆಯ ಶಿಕ್ಷಣವನ್ನು ಕಲಿಸಲು ಪ್ರಾರಂಭಿಸಿರುವುದು ಅತ್ಯಂತ ಸಂತೋಷದ ವಿಷಯ. ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 100 ಶಾಲೆಯಲ್ಲಿ ತುಳು ಭಾಷೆಯನ್ನು ಕಲಿಸುವ ಕಾರ್ಯ ಆಗಬೇಕು ಎಂಬ ಆಶಯ ಇತ್ತು. ಆದರೆ ಅದು ಆಗಲಿಲ್ಲ. ಆಗ ರಥಬೀದಿ ಕಾಲೇಜು ಮತ್ತು ಆಳ್ವಾಸ್ ಕಾಲೇಜಿನಲ್ಲಿ ಪ್ರಾರಂಭವಾಯಿತು ಇಂದು ಅನೇಕ ಕಡೆಗಳಲ್ಲಿ ಪ್ರಾರಂಭವಾಗಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಪಕ ಡಾ. ಶಿವರಾಮ ಶೆಟ್ಟಿ ಬಿ. ಮಾತನಾಡಿ, ಆಟಿ ಎಂದರೆ ಏನು ಎಂಬುವುದನ್ನು ಈಗಿನವರು ತಿಳಿದುಕೊಳ್ಳಬೇಕು.. ಮೊದಲಿನ ದಿನಗಳಲ್ಲಿ ಆಟಿ ಎಂದರೆ ಹೊಟ್ಟೆಗೆ ಏನು ಇಲ್ಲದ ಸಮಯ. ಅದು ಕಷ್ಟದ ಸಮಯ ಎಂದು ಹೇಳುತ್ತಿದ್ದರು. ಆದರೆ ಈಗ ಆಟಿಯನ್ನು ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿ ಸಂಭ್ರಮಿಸುತ್ತಿದ್ದಾರೆ. ನಾವು ನಮ್ಮ ಸಂಸ್ಕೃತಿಯನ್ನು ತಿಳಿಯಬೇಕು. ಅದರೊಂದಿಗೆ ಅದನ್ನು ಉಳಿಸಬೇಕು ಎಂದು ಹೇಳಿದರು.
ತೌಳವರು ಪ್ರಕೃತಿಗೆ ಅನುಗುಣವಾಗಿ ದೈವಗಳನ್ನು ಪೂಜಿಸುತ್ತಾರೆ, ದೇವರಿಗೆ ಕೈ ಮುಗಿಯುತ್ತಾರೆ. ಇಲ್ಲಿ ದೇವರಿಗಿಂತ ದೈವ ಮುಖ್ಯವಾಗಿದೆ. ನಾವು ಮಾಡುವ ಪೂಜೆಯಲ್ಲಿ ಯಾವುದೇ ಲೋಪ ಬಂದಲೂ ದೈವದಲ್ಲಿ ಕ್ಷಮೆ ಕೇಳಿದರೆ ಎಲ್ಲವೂ ಪರಿಹಾರವಾಗುತ್ತದೆ. ನಾವು ಇಲ್ಲಿ ಗುಡ್ಡ, ಕಾಡು, ಪರಿಸರದ ನಡುವಿನಲ್ಲಿ ಬದುಕುತ್ತಿದ್ದು, ಇಲ್ಲಿಯೇ ಪ್ರತ್ಯೇಕವಾದ ಕ್ಯಾಲೆಂಡರ್ ಇದ್ದು, ಅದರ ಪ್ರಕಾರ ಆಚರಣೆಗಳನ್ನು ನಡೆಸಲಾಗುತ್ತದೆ. ಆರೋಗ್ಯ ಕೆಡುವ ಮೊದಲೇ ಆಟಿ ಅಮವಾಸ್ಯೆಯ ದಿನ ಪಾಲೆ ಮರದ ತೊಗಟೆಯ ಕಷಾಯ ಕುಡಿಯುವ ಮೂಲಕ ಯಾವುದೇ ರೋಗ ಬಾರದಂತೆ ನೋಡಿಕ್ಕೊಳ್ಳುತ್ತೇವೆ. ರೋಗ ಬಂದ ನಂತರ ವೈದ್ಯರ ಬಳಿಗೆ ಹೋಗುವ ಬದಲು ನಾವು ರೋಗವನ್ನು ಬಾರದಂತೆ ತಡೆಯುವ ವೈಜ್ಞಾನಿಕತೆಯನ್ನು ನಮ್ಮ ಪೂರ್ವಜರು ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ವಹಿಸಿ ಮಾತನಾಡಿ, ಆಟಿ ಎಂದರೆ ಗೌಜು ಗಮ್ಮತ್ತು ಅಲ್ಲ. ನಾವು ಅದು ಏನು ಎಂಬುವುದನ್ನು ಕೇಳಿ ತಿಳಿದುಕೊಳ್ಳಬೇಕು. ಅಂತಹ ವಿಚಾರಕ್ಕೆ ಇಂತಹ ಕಾರ್ಯಕ್ರಮ ಉತ್ತರ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತುಳು ಉಪನ್ಯಾಸಕಿ ಮಣಿ ಎಂ. ರೈ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.
ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಾಂಸ್ಕೃತಿಕ ಸಂಘದ ಸಂಯೋಜಕಿ ಡಾ. ಕೃಷ್ಣಪ್ರಭಾ, ಗ್ರಂಥಪಾಲಕಿ ಕುಮಾರಿ ಉಮಾ ಬಿ., ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಅಪರ್ಣ ಆಳ್ವಾ, ಉಪನ್ಯಾಸಕರುಗಳಾದ ಡಾ. ವಿನೋದಾ, ಗೀತಾಕ್ಷೀ ಮತ್ತಿತರರು ಉಪಸ್ಥಿತರಿದ್ದರು.
ತುಳು ವಿಭಾಗದ ಮುಖ್ಯಸ್ಥೆ, ಐಕ್ಯೂಎಸಿ ಸಹಸಂಯೋಜಕಿ ಡಾ. ಜ್ಯೋತಿಪ್ರಿಯಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಧನ್ಯ ಪ್ರಾರ್ಥನೆ ನೆರವೇರಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಯಶಸ್ವಿನಿ ವಂದಿಸಿದರು.










