ಕೆಲಸ ಇಲ್ಲದೆ ಕಳ್ಳನಾದ...! ಚಿನ್ನಾಭರಣ ಕಳವು-ಆರೋಪಿ ಬಂಧನ
ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ದಿ. ನಾರಾಯಣ ನಾಯ್ಕ ಅವರ ಪುತ್ರ ದಯಾನಂದ ನಾಯ್ಕ ಎಂ. (29) ಬಂಧಿತ ಆರೋಪಿ. ಈಶ್ವರಮಂಗಲ ಪೇಟೆಯ ನಿವಾಸಿ ಶೋಭಾ ಕೃಷ್ಣರಾಯ ಅವರ ಮನೆಯಿಂದ ಆ. 12ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯ ಮಧ್ಯದಲ್ಲಿ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಸುಮಾರು 31 ಗ್ರಾಂ. ಬಂಗಾರ ಮತ್ತು ರೂ. 5000 ನಗದು ಕಳ್ಳತನ ಮಾಡಿದ್ದ. ಪೊಲೀಸ್ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ತಂಡ ಪ್ರಕರಣದ ತನಿಖೆ ಕೈಗೊಂಡು ಆ. 17ರಂದು ಈಶ್ವರಮಂಗಲದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯಿಂದ 30.020 ಗ್ರಾಂ. ಬಂಗಾರ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಪತ್ತೆ ಮಾಡುವಲ್ಲಿ ಎಎಸ್‌ಐ ಚಂದ್ರಶೇಖರ್, ಸಿಬ್ಬಂದಿ ಪ್ರವೀಣ್, ಮಧು, ಹರೀಶ್, ಸುಬ್ರಹ್ಮಣ್ಣ ಆಕಾಶ್, ಯುವರಾಜ್, ಶರಣಪ್ಪ ಪಾಟೀಲ್, ಚಾಲಕರಾದ ಎ.ಆರ್.ಎಸ್.ಐ. ಯಜ್ಞ, ಹರಿಪ್ರಸಾದ್ ಮತ್ತು ನಿತೇಶ್ ಸಹಕರಿಸಿದ್ದರು.
ಕೆಲಸ ಇಲ್ಲದೆ ಕಳ್ಳನಾದ..!
ಬಂಧಿತ ಆರೋಪಿ ದಯಾನಂದ ನಾಯ್ಕ ಕೆಂಪು ಕಲ್ಲಿನ ಲೋಡಿಂಗ್ ಕೆಲಸ ಮಾಡುತ್ತಿದ್ದ. ಅದರಲ್ಲಿ ಉತ್ತಮ ಸಂಪಾದನೆ ಮಾಡುತ್ತಿದ್ದ. ಆತ ವಿವಿಧ ಸಂಘ ಸಂಸ್ಥೆಗಳಿಂದ ಸಾಲ ಪಡೆದುಕೊಂಡಿದ್ದ. ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದ ಕಾರಣಕ್ಕೆ ಕಂಗೆಟ್ಟು ಕಳ್ಳತನಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.