
ತುಳು ಕೋಟದ ವೈದ್ಯಕೀಯ ಸೀಟು: ಸದನದಲ್ಲಿ ಚರ್ಚಿಸಲು ಶಾಸಕರಿಗೆ ಮನವಿ
ಮಂಗಳೂರು: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ತುಳು ಭಾಷಿಗ ವಿದ್ಯಾರ್ಥಿಗಳಿಗೆ ಮಾತೃಭಾಷೆ ಕೋಟಾದ ಮೀಸಲು ಸೀಟುಗಳನ್ನು ಈ ಹಿಂದಿನಂತೆ ಮುಂದುವರಿಸುವ ಸಲುವಾಗಿ ಸೂಕ್ತ ನಿಯಾಮಾವಳಿ ರೂಪಿಸುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ದ.ಕ. ಹಾಗೂ ಉಡುಪಿ ಜಿಲ್ಲೆಯ ಶಾಸಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಹಿಂದೆ ತುಳು ಮಾತೃ ಭಾಷಿಗ ವಿದ್ಯಾರ್ಥಿಗಳಿಗೆ ತುಳು ಭಾಷಾ ಆಡಳಿತ ಮಂಡಳಿಯ ವೈದ್ಯಕೀಯ ಕಾಲೇಜಿನವರು ನೀಡುತ್ತಿದ್ದ, ಸೀಟುಗಳು ಇದೀಗ ಕೆಲವು ವೈದ್ಯಕೀಯ ಕಾಲೇಜುಗಳಲ್ಲಿ ಸ್ಥಗಿತಗೊಂಡಿರುತ್ತದೆ. ಸದ್ರಿ ವೈದ್ಯಕೀಯ ಸಂಸ್ಥೆಗಳು ಡೀಮ್ ಟು ಬಿ ಯೂನಿವರ್ಸಿಟಿ ಆಗಿ ಬದಲಾದ ಬಳಿಕ ತುಳು ಭಾಷಿಗರಿಗೆ ಭಾಷಾ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ನೀಡಲಾಗುತ್ತಿದ್ದ ವೈದ್ಯಕೀಯ ಸೀಟುಗಳನ್ನು ಸಂಸ್ಥೆಯು ನೀಡುತ್ತಿಲ್ಲ.
ಪರಿಗಣಿತ ವಿಶ್ವವಿದ್ಯಾನಿಲಯವಾಗಿ ಮಾರ್ಪಾಡಾದ ಬಳಿಕ ನಾವು ಭಾಷಾ ಅಲ್ಪಸಂಖ್ಯಾತರ ಮೀಸಲು ಕೋಟಾದಲ್ಲಿ ಕಡ್ಡಾಯವಾಗಿ ವೈದ್ಯಕೀಯ ಸೀಟು ನೀಡಬೇಕೆಂದು ರಾಜ್ಯ ಸರಕಾರದ ಯಾವುದೇ ನಿರ್ದೇಶನಗಳು, ಮಾರ್ಗಸೂಚಿಗಳು ಇಲ್ಲದಿರುವುದರಿಂದ ಮೀಸಲು ಸೀಟುಗಳು ನೀಡುತ್ತಿಲ್ಲ ಅನ್ನುವುದು ಈ ಸಂಸ್ಥೆಗಳ
ಸಮರ್ಥನೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಮೀಸಲು ಸೀಟುಗಳ ಬಗ್ಗೆ ಸರಕಾರ ಸೂಕ್ತವಾದ ನಿರ್ದೇಶನ, ಮಾರ್ಗಸೂಚಿ ಹಾಗೂ ನಿಯಮಾವಳಿಗಳನ್ನು ರೂಪಿಸುವ ಅಗತ್ಯವಿದ್ದು, ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವಂತೆ ಕರಾವಳಿಯ ಶಾಸಕರುಗಳಿಗೆ ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮನವಿ ಮಾಡಿರುತ್ತಾರೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.