
ಚಿನ್ನಯ್ಯ ತೀವ್ರ ವಿಚಾರಣೆ-ಬುರುಡೆ ರಹಸ್ಯ ಬಯಲು: ನಕಲಿ ಮಾನವ ಹಕ್ಕು ಅಧಿಕಾರಿಗಳು ಕಣದಲ್ಲಿ
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಪೊಲೀಸರಿಗೆ ದೂರು ನೀಡುವ ವೇಳೆ ಮುಸುಕುಧಾರಿ ಚಿನ್ನಯ್ಯ ಯಾನೆ ಚೆನ್ನ ನೀಡಿದ ತಲೆ ಬುರುಡೆ ರಹಸ್ಯ ಇದೀಗ ಬಯಲಾಗಿದೆ.
ಚಿನ್ನಯ್ಯ ತಾನು ತಂದ ತಲೆ ಬುರುಡೆ 24 ವರ್ಷದ ಯುವತಿಯದ್ದು ಎಂದು ಪೊಲೀಸರನ್ನು ನಂಬಿಸಿದ್ದ. ಆದರೆ ಈಗ ಆ ತಲೆ ಬುರುಡೆ ಮಹಿಳೆಯದ್ದಲ್ಲ ಎಂಬುದು ಪೋರೆನ್ಸಿಕ್ ಪರೀಕ್ಷೆಯಿಂದ ದೃಢಪಟ್ಟಿದೆ. ಜೊತೆಗೆ ಅದು ಭೂಮಿಯಲ್ಲಿ ಹೂತಿದ್ದ ತಲೆ ಬುರುಡೆಯೂ ಅಲ್ಲ. ಧರ್ಮಸ್ಥಳ ಭಾಗದ ತಲೆ ಬುರುಡೆಯೂ ಅಲ್ಲ. ಮೆಡಿಕಲ್ ಕಾಲೇಜು ರಿಸರ್ಚ್ ಸೆಂಟರ್‌ನಿಂದ ಬುರುಡೆಯನ್ನು ತರಲಾಗಿತ್ತು ಎಂಬುದು ದೃಢವಾಗಿದೆ. ತಲೆ ಬುರುಡೆಯನ್ನು ಧರ್ಮಸ್ಥಳ ಕಾಡಲ್ಲಿ ಹೂತಿದ್ದೆ, ಅಲ್ಲಿಂದ ತಂದೇ ಎಂದು ಚಿನ್ನಯ ಹೇಳಿದ್ದ.
ಗೊಂದಲದ ಹೇಳಿಕೆ:
2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ ನಡೆದಿದ್ದ ಆನೆ ಮಾವುತ ಹಾಗೂ ಅವರ ಸಹೋದರಿ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಆಗ್ರಹಿಸಿ ವಿಶೇಷ ತನಿಖಾ ದಳಕ್ಕೆ ಎಸ್‌ಐಟಿಗೆ ದೂರು ಸಲ್ಲಿಕೆ ಆಗಿತ್ತು, ಆನೆ ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಆಗ್ರಹಿಸಿ ಅವರ ಮಕ್ಕಳಾದ ಗಣೇಶ್ ಮತ್ತು ಭಾರತಿ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ದೂರು ನೀಡಿದ್ದರು. ಈ ಪ್ರಕರಣದ ಕುರಿತಂತೆ ಚಿನ್ನಯ್ಯ ಯೂಟ್ಯೂಬ್‌ಗೆ ನೀಡಿದ ಹೇಳಿಕೆ ಹಾಗೂ ವಿಚಾರಣೆ ಸಂದರ್ಭದಲ್ಲಿ ನೀಡುತ್ತಿರುವ ಹೇಳಿಕೆ ತಾಳೆಯಾಗುತ್ತಿಲ್ಲ.
ಅಣ್ಣನಲ್ಲಿ ಹೇಳಿದ್ದ:
ಚಿನ್ನಯ್ಯನನ್ನು ಮೂರನೇ ದಿನವಾದ ಇಂದು ಎಸ್‌ಐಟಿ ಅಧಿಕಾರಿಗಳು ತೀವ್ರವಾಗಿ ವಿಚಾರಿಸಿದ್ದಾರೆ. ಈ ಸಂದರ್ಭ ತಲೆ ಬುರುಡೆ ಪ್ರಕರಣದ ವಿಚಾರವನ್ನು ತನ್ನ ಸಹೋದರ ತಾನಾಸಿಗೂ ತಿಳಿಸಿದ್ದೇನೆ ಎಂದಿದ್ದು, ಇದೀಗ ಎಸ್‌ಐಟಿ ತಂಡ ತಮಿಳುನಾಡು, ಮಂಡ್ಯಕ್ಕೆ ತೆರಳಿ ತನಿಖೆ ನಡೆಸಿದೆ.
ನೋಟೀಸ್‌ಗೆ ಸಿದ್ಧತೆ:
ಬುರುಡೆ ರಹಸ್ಯವನ್ನು ಎಸ್‌ಐಟಿ ಮುಂದೆ ಚಿನ್ನಯ್ಯ ತೆರೆದಿಟ್ಟಿದ್ದು, ಬುರುಡೆ ಸಂಚು ರೂಪಿಸಿದ ತಂಡಕ್ಕೆ ಎಸ್‌ಐಟಿ ನೋಟೀಸ್ ನೀಡಲು ಮುಂದಾಗಿದೆ. ಬುರುಡೆ ಪ್ರಹಸನದ ಕುರಿತು ತಂಡವೊಂದು
ಯೋಜನಾಬದ್ಧವಾಗಿ ಸುಳ್ಳುಗಳನ್ನು ಹೆಣೆದಿರುವುದನ್ನೂ ಚಿನ್ನಯ್ಯ ತನಿಖೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ. ಚಿನ್ನಯ್ಯನನ್ನು ಸೋಮವಾರ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ಕರೆತಂದು ಆರೋಗ್ಯ ತಪಾಸಣೆ ನಡೆಸಿ ವಾಪಸ್ ಎಸ್‌ಐಟಿ ಕಚೇರಿಗೆ ಕರೆತಂದಿದ್ದರು.
ನಕಲಿ ಮಾನವ ಹಕ್ಕು ಅಧಿಕಾರಿಗಳು:
ಪ್ರಕರಣದ ಒಂದೊಂದೇ ರಹಸ್ಯಗಳು ಬಯಲಾಗುತ್ತಿದೆ. ತಿಮರೋಡಿ ಬಂಧನ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗೆ ಗಿರೀಶ್ ಮಟ್ಟಣ್ಣನವರ್ ತನ್ನ ಸಂಗಡಿಗರೊಂದಿಗೆ ಬೆಳ್ತಂಗಡಿ ಠಾಣೆಗೆ ಬಂದಿದ್ದರು. ಆಗ ಅವರು ತಮ್ಮೊಂದಿಗೆ ಬಂದವರು ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಎಂದು ಪೊಲೀಸರಿಗೆ ಹೇಳಿದ್ದಾರೆ.
ಆದರೆ ಅಸಲಿಗೆ ಅವರು ಕರೆ ತಂದಿರುವುದು ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳೇ ಅಲ್ಲ. ಬದಲಾಗಿ ಅದರಲ್ಲೋರ್ವ ಹುಬ್ಬಳ್ಳಿ ಮೂಲದ ನಟೋರಿಯಸ್ ರೌಡಿ ಮದನ್ ಮುಗಡಿ ಎಂಬಾತನೂ ಇದ್ದಾನೆ. ಕೋಟ್ ಹಾಕ್ಕೊಂಡು ಬಂದಿದ್ದ ಈತನನ್ನು ಗಿರೀಶ್ ಮಟ್ಟಣ್ಣನವರ್ ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಪರಿಚಯಿಸಿದ್ದಾರೆ. ಆದರೆ ಸದ್ಯ ಹುಬ್ಬಳ್ಳಿ ನಗರ ಪೊಲೀಸ್ ಕಮಿಷನರ್ ನಡೆಸಿದ ರೌಡಿ ಶೀಟರ್ ಪರೇಡ್‌ನಲ್ಲಿ ಈತನೂ ಇದ್ದು, ಈತನ ವಿಚಾರಣೆ ಮಾಡುವ ವೀಡಿಯೋ ಇದೀಗ ವೈರಲ್ ಆಗಿದೆ.
ಜೊತೆಗಿದ್ದ ಮತ್ತೋರ್ವನು ಜಾನ್ ಶಾಮೈನ್ ಎಂಬ ಬೆಂಗಳೂರು ಮೂಲದ ವ್ಯಕ್ತಿ ಮಾನವ ಹಕ್ಕು ಆಯೋಗದ ಹೆಸರಲ್ಲಿ ಬೆಳ್ತಂಗಡಿಗೆ ಬಂದಿರುವುದು ಪತ್ತೆಯಾಗಿದೆ. ಈತ ಬೆಂಗಳೂರಿನಲ್ಲಿ ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಓಡಾಡುತ್ತ ಪೊಲೀಸರನ್ನೇ ಬೆದರಿಸಿ ವಸೂಲಿ ಮಾಡುತ್ತಿದ್ದಾನೆ ಆರೋಪಗಳಿವೆ.