
ಧರ್ಮಸ್ಥಳ ಪ್ರಕರಣ: ಎಸ್‌ಐಟಿ ಇನ್ಸ್‌ಪೆಕ್ಟರ್‌ನಿಂದ ದೂರುದಾರನಿಗೆ ಬೆದರಿಕೆ
ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆ ನಡೆಯುತ್ತಿರುವಾಗಲೇ ಎಸ್‌ಐಟಿ ತಂಡದ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ, ದೂರು ಹಿಂಪಡೆಯುವಂತೆ ಬೆದರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ದೂರುದಾರನ ಪರ ವಕೀಲರು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದು, ಅದರ ಪ್ರತಿಯನ್ನು ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ.
ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಆ.1ರಂದು ರಾತ್ರಿ ದೂರುದಾರ ವ್ಯಕ್ತಿಯ ವಿಚಾರಣೆ ನಡೆಯುತ್ತಿದ್ದಾಗ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ ಬೆದರಿಕೆ ಹಾಕಿದ್ದಾರೆ. ವ್ಯಕ್ತಿಯಿಂದ ಹೇಳಿಕೆ ಪಡೆಯುವಾಗ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಈ ವೇಳೆ ಇಷ್ಟೆಲ್ಲ ಕರಾಮತ್ತು ಮಾಡೋ ಬದಲು ದೂರು ಹಿಂಪಡೆಯಬಹುದಲ್ವಾ.. ಏನೂ ಸಿಗದಿದ್ದರೆ ನೋಡೋಣ. ಒದ್ದು ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಸಿದ್ದಾರೆ ಎಂಬುದಾಗಿ ದೂರುದಾರ ವ್ಯಕ್ತಿಯ ಪರ ವಕೀಲರು ಎಸ್‌ಐಟಿ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ.
ಮಂಜುನಾಥ ಗೌಡ ಶಿರಸಿ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದು, ಎಸ್‌ಐಟಿ ತಂಡಕ್ಕೆ ನಿಯೋಜನೆಗೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಎಸ್‌ಐಟಿ ತಂಡದ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಮಂಜುನಾಥ್ ಗೌಡ ಎಂಬ ಪೊಲೀಸ್ ಅಧಿಕಾರಿಯು ಸಾಕ್ಷಿ ದೂರುದಾರನನ್ನ ಬೆದರಿಸಿ, ಆತನಿಂದ ವ್ಯತಿರಿಕ್ತ ಹೇಳಿಕೆಗಳನ್ನು ಪಡೆದು, ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ ಎಂಬ ಸಾಕ್ಷಿದಾರರ ಪರ ವಕೀಲರ ದೂರು ಎಸ್‌ಐಟಿಯನ್ನು ಮತ್ತಷ್ಟು ಬಲಪಡಿಸಲು ಸಹಾಯಕವಾಗುತ್ತದೆ ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಎಂಬವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಹೇಳಿದ್ದಾರೆ. ವಿಶೇಷ ತನಿಖಾ ದಳವು (ಎಸ್‌ಐಟಿ) ಮಂಜುನಾಥ್ ಗೌಡರನ್ನು ವಿಚಾರಣೆಗೆ ಒಳಪಡಿಸುವ ನಿರೀಕ್ಷೆ ಮತ್ತು ವಿಶ್ವಾಸವಿದೆ. ಪ್ರಣವ ಮೊಹಾಂತಿ ನೇತೃತ್ವದ ಈ ಎಸ್‌ಐಟಿಯು ಮುಂಜಾಗೃತಾ ಕ್ರಮ ವಹಿಸಿ ಮಂಜುನಾಥ್ ಗೌಡರ ಮೇಲೆ ಹಿಂದಿನಿಂದಲೇ ನಿಗಾ ವಹಿಸಿತ್ತು ಎಂದು ನಂಬಲರ್ಹ ಮೂಲಗಳು ಹೇಳಿವೆ. ಇಂದಿನ ಬೆಳವಣಿಗೆಯು ಎಸ್‌ಐಟಿಯನ್ನು ಮತ್ತಷ್ಟು ಬಲಪಡಿಸಲು ಸಹಾಯವಾಗುವುದೆಂಬ ವಿಶ್ವಾಸವಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಡತ ಇಲ್ಲ..
ತನಿಖೆಯ ನಡುವಲ್ಲೇ 2000ದಿಂದ 2014ರ ನಡುವೆ ದಾಖಲಾದ ಅಸಹಜ ಸಾವಿನ ಪ್ರಕರಣಗಳ ದಾಖಲೆಗಳನ್ನು ಬೆಳ್ತಂಗಡಿ ಪೊಲೀಸರಿಂದ ಆರ್ಟಿಐ ಅರ್ಜಿಯಲ್ಲಿ ಕೇಳಲಾಗಿದ್ದು ಹಳೆ ದಾಖಲೆಗಳು ತಮ್ಮಲ್ಲಿ ಇಲ್ಲವೆಂಬ ಉತ್ತರ ನೀಡಿದ್ದಾರೆ. ಇದರ ಬಗ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದು ಹಳೆ ದಾಖಲೆ ನಾಶಪಡಿಸಿದ್ದು ಯಾಕೆಂಬ ಪ್ರಶ್ನೆ ಎದುರಾಗಿದೆ.