ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುತ್ತಿದೆ: ಸಚಿವ ದಿನೇಶ್ ಗುಂಡೂರಾವ್
Sunday, August 31, 2025
ಮಂಗಳೂರು: ಧರ್ಮಸ್ಥಳ ವಿಚಾರವಾಗಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುತ್ತಿದೆ. ಅವರದ್ದು ಸ್ವಾರ್ಥ ರಾಜಕಾರಣ ಅದರ ಬದಲು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಹಣ ಕೊಡಿಸಲು ಹೋರಾಟ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿರು.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಉದ್ದೇಶವೇನೆಂದು ಎಲ್ಲರಿಗೂ ಗೊತ್ತು. ಅವರು ಧರ್ಮ ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ಇಂತಹ ಸಮಾವೇಶ ಮಂಜುನಾಥ ಸ್ವಾಮಿಗೆ ಅಗತ್ಯವಿಲ್ಲ ಧರ್ಮಸ್ಥಳ ರಕ್ಷಣೆಗೆ ಸರಕಾರವಿದೆ ಎಂದರು.
ಎಸ್‌ಐಟಿ ನಿಜಾಂಶ ಹೊರಗೆ ತರುವ ಕೆಲಸ ಮಾಡುತ್ತಿದೆ. ಬಿಜೆಪಿಯವರಿಗೆ ಬೇರೆ ವಿಷಯವಿಲ್ಲ. ಸರಕಾರಕ್ಕೆ ಕೆಟ್ಟ ಹೆಸರು ತರಲು ಇದನ್ನೆಲ್ಲ ಮಾಡುತ್ತಿದ್ದಾರೆ. ಎಸ್‌ಐಟಿ ಯಾವುದೇ ಹಸ್ತಕ್ಷೇಪವಿಲ್ಲದೆ ಕೆಲಸ ಮಾಡುತ್ತಿದೆ. ಸೌಜನ್ಯ ಪ್ರಕರಣವಾಗಿದ್ದಾಗ ಅವರದ್ದೆ ಸರಕಾರ, ಪೊಲೀಸ್ ಇತ್ತು. ಅವರೇನು ಮಾಡಿದ್ದಾರೆ? ಎನ್‌ಐಎ ತನಿಖೆ ಬೇಕಾಗಿಲ್ಲ. ಬಿಜೆಪಿಯ ಬೆಂಬಲವೂ ಬೇಕಾಗಿಲ್ಲ ಎಂದು ಹೇಳಿದರು.