ಬೀದಿಬದಿ ವ್ಯಾಪಾರಿಗಳ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ: ಪಿಎಂ ಸ್ವನಿಧಿ ಸಾಲ ಯೋಜನೆ ಮುಂದುವರಿಸಲು ಒತ್ತಾಯಿಸಿ ಪ್ರತಿಭಟನೆ
Tuesday, August 19, 2025
ಮಂಗಳೂರು: ಬೀದಿಬದಿ ವ್ಯಾಪಾರಿಗಳ ಸ್ವಾವಲಂಬಿ ಬದುಕಿಗಾಗಿ ಜಾರಿ ಮಾಡಿದ್ದ ಪಿಎಂ ಸ್ವನಿಧಿ ಸಾಲ ಯೋಜನೆಯನ್ನು ತಡೆಹಿಡಿದಿರುವ ಕ್ರಮವನ್ನು ವಿರೋಧಿಸಿ, ಕೂಡಲೇ ಸ್ವನಿಧಿ ಸಾಲ ಯೋಜನೆ ಪುನರಾರಾಂಭಿಸಲು ಒತ್ತಾಯಿಸಿ ಬೀದಿಬದಿ ವ್ಯಾಪಾರಿಗಳ ಮೇಲಿನ ದಾಳಿ ದಬ್ಬಾಳಿಕೆ ಖಂಡಿಸಿ ಆ.೧೯ ರಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ಸ್ವಾಭಿಮಾನದಿಂದ ಬದುಕು ಸಾಗಿಸುವ ಶ್ರಮ ಜೀವಿಗಳು, ಅವರ ಬದುಕಿಗೆ ಆಸರೆ ಆಗಿದ್ದ ಸಾಲ ಯೋಜನೆಯನ್ನು ಸ್ಥಗಿತಗೊಳಿಸಿ ಬೀದಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ತಳ್ಳಲಾಗಿದೆ, ಬೀದಿ ವ್ಯಾಪಾರಿಗಳು ಬ್ಯಾಂಕಿನಿಂದ ಪಡೆದ ಸಾಲವನ್ನು ನಿಗದಿತ ಅವಧಿ ಒಳಗೆ ಮರುಪಾವತಿ ಮಾಡುತ್ತಿದ್ದರೂ ಪಿಎಂ ಸ್ವನಿಧಿ ಸಾಲ ಯೋಜನೆ ತಡೆಹಿಡಿದಿರುವುದು ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದರು.
ಸಂಘದ ಗೌರವಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಜೂನ್ 2020 ಕೋವಿಡ್ ಸಂಕಷ್ಟ ಎದುರಿಸಲು ಕೇಂದ್ರ ಸರಕಾರ ಜಾರಿಗೆ ತಂದಿದ್ದ ಆತ್ಮ ನಿರ್ಭರ ಯೋಜನೆ ಅಡಿಯಲ್ಲಿ ಬೀದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರಕಾರ ಬ್ಯಾಂಕುಗಳ ಮೂಲಕ ಜಾರಿಗೊಳಿಸಿದ್ದ ಪಿಎಂ ಸ್ವನಿಧಿ ಕಿರು ಸಾಲ ಯೋಜನೆ ಅಡಿಯಲ್ಲಿ ದೇಶದಲ್ಲಿ ಬೀದಿ ವ್ಯಾಪಾರಿಗಳಿಗೆ ಮೂರು ಹಂತಗಳಲ್ಲಿ 9600 ಕೋಟಿ ರೂ. ಸಾಲ ನೀಡಲಾಗಿದ್ದು ಸರಕಾರದ ಅಧಿಕೃತ ವರದಿಯಂತೆ ಶೇ.70 ಸಾಲ ಮರುಪಾವತಿ ಆಗಿದ್ದು ಇನ್ನುಳಿದ ಸಾಲ ಮರುಪಾವತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಿರುಸಾಲ ಯೋಜನೆಗಳಲ್ಲಿ ಅತಿ ಹೆಚ್ಚು ಮರು ಪಾವತಿ ಆಗಿರುವ ಸಾಲ ಯೋಜನೆ ಇದಾಗಿದೆ.
ಆದರೂ ಕೇಂದ್ರ ಸರಕಾರ ಶೇ.7 ಸಬ್ಸಿಡಿ ಹಣ ನೀಡಲು ಸರಕಾರದ ಬಳಿ ಆರ್ಥಿಕತೆಯ ಕೊರತೆಯ ಕಾರಣಕ್ಕಾಗಿ ಪಿಎಂ ಸಾಲ ಯೋಜನೆಯನ್ನು ತಡೆ ಹಿಡಿದಿದೆ. ಮಂಗಳೂರು ನಗರದಲ್ಲಿ ಅತೀ ಹೆಚ್ಚು 8000ಕ್ಕೂ ಹೆಚ್ಚು ಮಂದಿಗೆ ಸಾಲ ನೀಡಲಾಗಿದೆ ಗರಿಷ್ಟ ಮಟ್ಟದಲ್ಲಿ ಮರು ಪಾವತಿಯು ಆಗಿದೆ. ಆದರೆ ಎರಡು ಮತ್ತು ಮೂರನೇ ಹಂತದ ಸಾಲ ನೀಡುವಾಗ ಬ್ಯಾಂಕ್ ಅಧಿಕಾರಿಗಳು ಅನಗತ್ಯ ದಾಖಲೆ ಕೇಳುವುದು, ಸಿಬಿಲ್ ಅಂಕಗಳನ್ನು ಮಾನದಂಡ ಮಾಡಿಕೊಂಡು ಬಡ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಲಾಗಿದೆ. ಇದೀಗ 50000 ಸಾಲ ಮರುಪಾವತಿ ಮಾಡಿದವರಿಗೆ ಒಂದು ಲಕ್ಷ ಕೊಡಲು ಅವಕಾಶ ಇದ್ದರೂ ಬ್ಯಾಂಕುಗಳಿಗೆ ಮುಕ್ತ ಅವಕಾಶ ನೀಡದೆ ಡೇನಲ್ಮ್ ಯೋಜನೆ ಅಡ್ಡಿಯಾಗುತ್ತಿದೆ. ಬ್ಯಾಂಕುಗಳಿಗೆ ಮುಕ್ತ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಮುಖರಾದ ಹಂಝ ಮೊಹಮ್ಮದ್, ಸಿಕಂದರ್ ಬೇಗ್, ಎಂ.ಎನ್. ಶಿವಪ್ಪ, ಹಸನ್ ಕುದ್ರೋಳಿ, ಅಬ್ದುಲ್ ಖಾದರ್, ವಿಜಯ್ ಜೈನ್, ಸ್ಟ್ಯಾನಿ ಡಿಸೋಜ, ಚೆರಿಯೋನು ಸುರತ್ಕಲ್, ಎಂ.ಎಸ್. ಮೊಯಿದಿನ್, ಮುತ್ತುರಾಜ್, ಗುಡ್ಡಪ್ಪ, ಶಾಲಿನಿ ಬೋಂದೆಲ್, ಸಿದ್ದಮ್ಮ, ಗೀತಾ ಬಾಯಿ, ವಿನಾಯಕ ಶೆಣೈ, ಗಂಗಮ್ಮ, ಖಾಜ ಮೊಯಿದಿನ್, ರಫೀಕ್ ಪಾಂಡೇಶ್ವರ, ನೌಶಾದ್ ಕಣ್ಣೂರು, ರಿಯಾಜ್ ಮದಕ, ಸಲಾಂ ಸುರತ್ಕಲ್, ಸ್ವಾಮಿ ಲೇಡಿಹಿಲ್, ಮಲ್ಲೇಶ್, ಅಬ್ದುಲ್ ಖಾದರ್ ವಾಮಂಜೂರು, ರಫೀಕ್ ಸ್ಟೇಟ್ ಬ್ಯಾಂಕ್, ಹಮೀದ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ಸ್ವಾಗತಿಸಿ, ಸಂಘದ ಅಧ್ಯಕ್ಷ ಮುಜಾಫರ್ ಅಹ್ಮದ್ ವಂದಿಸಿದರು.
ಪ್ರತಿಭಟನೆಗೂ ಮುನ್ನ ಬಲ್ಲಾಳ್‌ಭಾಗ್‌ನಿಂದ ಪಾಲಿಕೆ ಕಚೇರಿ ವರೆಗೆ ಮೆರವಣಿಗೆ ನಡೆಯಿತು. ಪಾಲಿಕೆಯ ಉಪ ಆಯುಕ್ತ ಸ್ವಾಮಿ ಅವರು ಮನವಿ ಸ್ವೀಕರಿಸಿದರು.
ಹೊಟ್ಟೆ ತುಂಬಿದವರಿಗೆ ಕಿರು ಸಾಲದ ಮಹತ್ವ ಅರ್ಥವಾಗದು:
ಪಿಎಂ ಸ್ವನಿಧಿ ಸಾಲ ಸ್ಥಗಿತ ಮಾಡಿರುವವುದನ್ನು ವಿರೋಧಿಸಿ ದೇಶದಲ್ಲಿ ಇದು ಮೊದಲನೇ ಪ್ರತಿಭಟನೆ ಮಂಗಳೂರಿನಲ್ಲಿ ಇಂದು ದಾಖಲಾಗಿದೆ. ಕೇಂದ್ರ ಸರಕಾರ ತಪ್ಪು ಆರ್ಥಿಕ ನೀತಿಯಿಂದಾಗಿ ಬಡವರಿಗೆ ಆಸರೆ ಆಗಿದ್ದ ಆರ್ಥಿಕ ಪ್ರೋತ್ಸಾಹದ ಯೋಜನೆಯೊಂದು ನೆನೆಗುದಿಗೆ ಬಿದ್ದಿದೆ ಎಂದು ಹೇಳಿದರು.



