ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ತಡೆಯಲು ಸುಪ್ರೀಂಕೋರ್ಟ್‌ಗೆ ಅರ್ಜಿ
ಧರ್ಮಸ್ಥಳದಲ್ಲಿ ನೂರಾರು ಕೊಲೆ ಆಗಿದೆ ಎಂದು ಆರೋಪಿಸಲಾಗಿದೆ. ನೂರಾರು ಕೊಲೆ ಆಗಿರುವ ಸಾಧ್ಯತೆ ಇಲ್ಲ. ಯಾರಿಗಾದರೂ ಅನ್ಯಾಯವಾಗಿದ್ದಲ್ಲಿ ಕಾನೂನು, ನ್ಯಾಯಾಲಯಗಳಿವೆ. ಆದರೆ, ಹೋರಾಟದ ಹೆಸರಿನಲ್ಲಿ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಆ ಮೂಲಕ ಜನತೆಯನ್ನು ಹಾದಿತಪ್ಪಿಸುವುದು ಸರಿಯಲ್ಲ. ಅನ್ಯಾಯವಾಗಿದ್ದರೆ ಕಾನೂನು ಹೋರಾಟ ನಡೆಸಬಹುದು. ಧರ್ಮಸ್ಥಳ ಪವಿತ್ರ ಕ್ಷೇತ್ರವಾಗಿದ್ದು, ಶಕ್ತಿಪೀಠವಾಗಿದೆ. ಕ್ಷೇತ್ರದ ಪಾವಿತ್ರ್ಯತೆಗೆ ಯಾವುದೇ ಚ್ಯುತಿ ತರಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಧರ್ಮಸ್ಥಳ ಲಕ್ಷಾಂತರ ಭಕ್ತರು ಪ್ರತಿದಿನ ಭೇಟಿ ನೀಡುವ ಪವಿತ್ರ ಸ್ಥಳವಾಗಿದ್ದು, ಲಕ್ಷಾಂತರ ಭಕ್ತರಿಗೆ ಉಚಿತ ಭೋಜನ ನೀಡಲಾಗುತ್ತಿದೆ. ಆರೋಗ್ಯ ಕೇಂದ್ರ, ಶಿಕ್ಷಣ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಉಚಿತ ಆರೋಗ್ಯ ಶಿಬಿರ, ಬಾಲ ಸಂಸ್ಕಾರ ಕೇಂದ್ರ ಸಹಿತ ಜನಸಾಮಾನ್ಯರಿಗೆ ಪ್ರಯೋಜನವಾಗುವ ಹಲವು ಯೋಜನೆಗಳು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ನೇತೃತ್ವದಲ್ಲಿ ಕ್ಷೇತ್ರದ ವತಿಯಿಂದ ಯಶಸ್ವಿಯಾಗಿ ನಡೆಯುತ್ತಿವೆ. ಇಂತಹ ಕ್ಷೇತ್ರದ ವಿರುದ್ಧ ನಡೆಯುವ ಅಪ್ರಪಚಾರ ಸನಾತನ ಧರ್ಮ, ಹಿಂದು ಸಂಸ್ಕೃತಿ, ಧಾರ್ಮಿಕ ಸಹಿಷ್ಣುತೆಗೆ ಅಪಾಯಕಾರಿಯಾಗಿದೆ. ಇಂತಹ ಸಂದರ್ಭ ಧರ್ಮ ರಕ್ಷಣೆ ಎಲ್ಲರ ಕರ್ತವ್ಯ ಎಂದರು.
ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ. ಜಗದೀಶ್ ಅಧಿಕಾರಿ ಮಾತನಾಡಿ, ಧರ್ಮಸ್ಥಳದ ವಿರುದ್ಧದ ಆಪಾದನೆಗಳ ತನಿಖೆಗೆ ಎಸ್‌ಐಟಿ ರಚನೆ ಸೂಕ್ತ ನಿರ್ಧಾರ. ಆದರೆ, ಉತ್ಖನನ ಮಾಡಿದ ಸ್ಥಳದಲ್ಲಿ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ. ಯಾರಿಗೂ ಅನ್ಯಾಯವಾಗಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ, ಕ್ಷೇತ್ರದ ಬಗ್ಗೆ ಅಪಪ್ರಚಾರ ನಿಲ್ಲಬೇಕು. ಅಪಪ್ರಚಾರ ವಿರುದ್ಧ ದೂರು ನೀಡುವ ಜತೆಗೆ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಗುವುದು. ಧರ್ಮಸ್ಥಳ ಕ್ಷೇತ್ರದ ವಿಚಾರದಲ್ಲಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ಸರಿಯಾದ ಹೇಳಿಕೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯ ಶಂಕರ್ ಸುವರ್ಣ ಉಪಸ್ಥಿತರಿದ್ದರು.