ಧರ್ಮಸ್ಥಳ ಪ್ರಕರಣ: ಚಿನ್ನಯ್ಯನೊಂದಿಗೆ ಬೆಂಗಳೂರಿನ ಪೀಣ್ಯದಲ್ಲಿ ಎಸ್‌ಐಟಿ ಸ್ಥಳ ಮಹಜರು
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿ ಸಾಕ್ಷಿ ದೂರುದಾರನಾಗಿ ಬಂದು, ನಂತರ ತನ್ನ ಹೇಳಿಕೆ ಸುಳ್ಳು ಎಂದು ಹೇಳಿ ಎಸ್‌ಐಟಿಯಿಂದ ಬಂಧಿತನಾಗಿರುವ ಚಿನ್ನಯ್ಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತೀವ್ರ ವಿಚಾರಣೆಗೊಳಪಡಿಸಿದ್ದು, ಸ್ಥಳ ಮಹಜರು ನಡೆಸಲು ಚಿನ್ನಯ್ಯನನ್ನು ಬಿಗಿ ಭದ್ರತೆಯೊಂದಿಗೆ ಕರೆದುಕೊಂಡು ಹೋಗಲಾಗಿದೆ.
ಚಿನ್ನಯ್ಯನ್ನು ಬೆಳ್ಳಂಬೆಳಗ್ಗೆ ಎಸ್‌ಐಟಿ ತಂಡ ಅಜ್ಞಾತ ಸ್ಥಳಕ್ಕೆ ಮಹಜರಿಗೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿತ್ತು, ಆದರೆ ಬೆಂಗಳೂರು ಪೀಣ್ಯದಲ್ಲಿರುವ ಹೋರಾಟಗಾರ ಜಯಂತ್ ನಿವಾಸಕ್ಕೆ ಕೊಂಡೊಯ್ದು ಮಹಜರು ನಡೆಸಲಾಗಿದೆ. ಎಂದು ತಿಳಿದು ಬಂದಿದೆ.
ಜಯಂತ್ ಮನೆಯಲ್ಲಿದ್ದುಕೊಂಡು ಬುರುಡೆ ಪ್ರಕರಣದ ಷಡ್ಯಂತ್ರ ರೂಪಿಸಿರುವ ಬಗ್ಗೆ ಚಿನ್ನಯ್ಯ ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದಾನೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಚಿನ್ನಯ್ಯನನ್ನು ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಜಯಂತ್‌ನ ಮನೆಯವರನ್ನೂ ವಿಚಾರಣೆ ನಡೆಸಲಾಗಿದೆ. ನಾನು ಯಾವ ತಪ್ಪು ಮಾಡಿಲ್ಲ, ತಪ್ಪಿತಸ್ಥನಾದರೆ ನಾವು ಬಂಧನಕ್ಕೂ ಸಿದ್ಧ ಎಂದು ಜಯಂತ್ ಪ್ರತಿಕ್ರಿಯಿಸಿರುವುದಾಗಿ ಹೇಳಲಾಗಿದೆ. ನಂತರ ಅವಶ್ಯವಾದರೆ ಚಿನ್ನಯ್ಯ ವಾಸ್ತವ್ಯವಿದ್ದ ಮಂಡ್ಯ, ತಮಿಳುನಾಡಿಗೂ ಮಹಜರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಚಿತ್ರದುರ್ಗದ ಮಹಿಳೆ ಹೆಸರು..
ಪ್ರಕರಣದಲ್ಲಿ ಚಿತ್ರದುರ್ಗ ಮೂಲದ ಮಹಿಳೆಯೊಬ್ಬರು ಪಾತ್ರ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಧರ್ಮಸ್ಥಳದ ವಿರುದ್ಧದ ಸಂಚಿಗೆ ಈ ಮಹಿಳೆ ಹಣಕಾಸು ನೆರವು ನೀಡಿದ್ದಾಳೆ ಎನ್ನಲಾಗಿದೆ. ಧರ್ಮಸ್ಥಳದ ಜೊತೆಗೆ ಆ ಮಹಿಳೆ ಜಾಗದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದು ಈ ಕಾರಣಕ್ಕಾಗಿ ಹಣಕಾಸು ನೆರವು ನೀಡಿದ್ದಾಳೆ ಎಂದು ಚಿನ್ನಯ್ಯ ತನಿಖೆ ವೇಳೆ ತಿಳಿಸಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಎಸ್‌ಐಟಿ ಅಧಿಕಾರಿಗಳು ಫಂಡಿಂಗ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಮೀರ್ ಹಾಜರು..
ಧರ್ಮಸ್ಥಳದ ವಿರುದ್ಧ ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಿ ಅವಹೇಳಿನ ಮಾಡಿದ ಆರೋಪ ಎದುರಿಸುತ್ತಿರುವ ಯುಟ್ಯೂಬರ್ ಸಮೀರ್ ಇಂದು ಮತ್ತೆ ಮೂರನೇ ಸಲ ವಿಚಾರಣೆ ಹಾಜರಾಗಿದ್ದಾನೆ. ಸಮೀರ್‌ನನ್ನು ಸುಮಾರು ೪೫ ನಿಮಿಷಗಳ ಕಾಲ ವಿಚಾರಿಸಲಾಗಿದೆ. ಪೊಲೀಸರು ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಮೂಲ ದಾಖಲೆ ವಿಡಿಯೋ ಹಾಗೂ ಹಲವು ತಾಂತ್ರಿಕ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಉಜಿರೆ ಆಸ್ಪತ್ರೆಯಲ್ಲಿ ಅಕ್ರಮ ಕೂಟ ಸೇರಿ ನಡೆಸಿದ ಗಲಾಟೆ ಹಾಗೂ ಖಾಸಗಿ ದೃಶ್ಯ ಮಾಧ್ಯಮದ ವರದಿಗಾರನಿಗೆ ಹಲ್ಲೆ ನಡೆಸಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಸೆ.3 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಮೂರನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮೊನ್ನೆಯೇ ನೋಟಿಸ್ ನೀಡಿದ್ದರು. ಆದರೆ ಅನಾರೋಗ್ಯದ ಕಾರಣ
ನೀಡಿ ಸಮೀರ್ ವಿಚಾರಣೆಗೆ ಬಂದಿರಲಿಲ್ಲ.
500 ಪುಟಗಳ ದಾಖಲೆ..
ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂಳಲಾದ ಬಗ್ಗೆ ಫೋರ್ಜರಿ ದಾಖಲೆ ನೀಡಲಾಗಿದೆ ಎಂಬ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ದೂರಿನ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ
ಧರ್ಮಸ್ಥಳ ಪಂಚಾಯತ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ಗಿರೀಶ್ ಮಟ್ಟಣ್ಣವರ್ ಶುಕ್ರವಾರ ಪಂಚಾಯತ್ ಬಳಿ ಫೋರ್ಜರಿ ದಾಖಲೆ ಇದೆ
ಎಂದು 500 ಪುಟಗಳ ದಾಖಲೆಗಳನ್ನು ಎಸ್‌ಐಟಿಗೆ ಸಲ್ಲಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಪಿಡಿಒ, ಪಂಚಾಯತ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು
ಸೂಚನೆ ನೀಡಲಾಗಿದೆ. ಮಟ್ಟಣ್ಣವರ್ ದಾಖಲೆ ಜೊತೆ ಪಂಚಾಯತ್ ದಾಖಲೆಗಳ ಸಾಮ್ಯತೆಯನ್ನು ಎಸ್‌ಐಟಿ ಪರಿಶೀಲನೆ ಮಾಡಲಿದೆ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಂದ ಎಸ್‌ಐಟಿ ಮಾಹಿತಿ ಸಂಗ್ರಹಿಸಲಿದೆ.
ಸೋಮವಾರ ಕರ್ತವ್ಯಕ್ಕೆ..
ವೈಯಕ್ತಿಕ ನೆಲೆಯಲ್ಲಿ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಎಸ್‌ಐಟಿ ತನಿಖಾಧಿಕಾರಿ ಅನುಚೇತ್ ಸೋಮವಾರ ಆಗಮಿಸುವ ನಿರೀಕ್ಷೆ ಇದೆ. ಅದೇ ರೀತಿ ತುರ್ತು ರಜೆ ಮೇಲೆ ತೆರಳಿದ್ದ ಇನ್ನೋರ್ವ ಅಧಿಕಾರಿ ಜಿತೇಂದ್ರ ದಯಾಮ ಕೂಡ ಸೋಮವಾರ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ.