ಈಡಿಗ ಸಮುದಾಯದವರು ‘ಬಿಲ್ಲವ’ ಎಂದು ನಮೂದಿಸಿ

ಈಡಿಗ ಸಮುದಾಯದವರು ‘ಬಿಲ್ಲವ’ ಎಂದು ನಮೂದಿಸಿ

ಮಂಗಳೂರು: ನಮ್ಮ ಮುಂದಿನ ಪೀಳಿಗೆ ಬೆಳೆಯಬೇಕಾದರೆ ಸರ್ಕಾರದಿಂದ ಸಿಗುವ ಶೇಕಡಾವಾರು ಮೀಸಲಾತಿ ಮತ್ತು ಅಭಿವೃದ್ಧಿ ನಿಗಮ ಅಗತ್ಯವಾಗಿದೆ. ಆದ್ದರಿಂದ ಜಾತಿಗಣತಿ ವೇಳೆ ಬೇರೆ ಬೇರೆ ಉಪನಾಮಗಳಲ್ಲಿ ಗುರುತಿಸಿಕೊಂಡಿರುವ ಈಡಿಗ ಸಮುದಾಯದವರು  ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ‘ಬಿಲ್ಲವ’ ಎಂದು ನಮೂದಿಸಬೇಕು ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಮುದಾಯ ವಿವಿಧ ಉಪನಾಮಗಳಲ್ಲಿ ಗುರುತಿಸಿಕೊಂಡಿದೆ. ಇದರಿಂದ ಒಗ್ಗಟ್ಟಿಗೆ ಮುಂದೆ ತೊಡಕಾಗಬಹುದು. ಜಾತಿ ಗಣತಿ ಕಾಲಂನಲ್ಲಿ ಬಿಲ್ಲವ ಎಂದೇ ನಮೂದಿಸಿದರೆ ಉತ್ತಮ ಎಂದರು.

ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗಲು, ನಿಖರವಾದ ಜನಸಂಖ್ಯೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಮಹತ್ವದ್ದಾಗಿದೆ. ಹೀಗಾಗಿ, ಜಾತಿ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕಾದ ಅವಶ್ಯಕತೆಯಿದೆ. ಕಾಂತರಾಜು ಆಯೋಗದ ವರದಿಯಲ್ಲಿ ಈಡಿಗ 26 ಪಂಗಡಳಲ್ಲಿ ಬಿಲ್ಲವ ಮತ್ತು ಪೂಜಾರಿ ಎಂದು ಪ್ರತ್ಯೇಕವಾಗಿ ನಮೂದಿಸಲಾಗಿದೆ. ಆದರೆ, ಅನೇಕ ಕಡೆ ದೇವಸ್ಥಾನಗಳಲ್ಲಿ ಪೂಜೆ ಮಾಡುವವರು ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಕೆಲವು ವ್ಯತ್ಯಾಸ ಆಗುವ ಸಾಧ್ಯತೆಗಳು ಇವೆ. ನಮ್ಮ ಸಮುದಾಯದ ಜನಸಂಖ್ಯೆ ದಕ್ಷಿಣ ಕನ್ನಡ, ಉಡುಪಿಯಲ್ಲಿ 8 ಲಕ್ಷದಷ್ಟಿದೆ. ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತಿತರ ಭಾಗಗಳಲ್ಲಿಯೂ ಇದೆ ಎಂದರು.

ಅಖಿಲಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಅವರು ಮಾತನಾಡಿ, ಹಿಂದೆ ಸಮೀಕ್ಷೆ ಸಂದರ್ಭದಲ್ಲಿ ಬಿಲ್ಲವರ ಹೆಸರಿನೊಂದಿಗೆ ಇರುವ ಕೋಟ್ಯಾನ್, ಬಂಗೇರ, ಅಂಚನ್ ಇತ್ಯಾದಿ ‘ಬರಿ’ಯನ್ನು ನಮೂದಿಸಿದ್ದರಿಂದ ಗೊಂದಲವಾಗಿ ನಿಖರವಾಗಿ ಜನಸಂಖ್ಯೆ ದಾಖಲಾಗದೆ ಉಳಿದಿರುವ ಸಾಧ್ಯತೆಗಳಿವೆ. ಬರಿ ಯಾವುದೇ ಇದ್ದರೂ ಜಾತಿ ಕಾಲಂನಲ್ಲಿ ಬಿಲ್ಲವ ಎಂದು ನಮೂದಿಸುವುದು ಸರಿಯಾದ ವಿಧಾನ, ಈ ಕುರಿತು ರಾಷ್ಟ್ರೀಯ ಬಿಲ್ಲವರ ಮಹಾಮಂಡ ಮತ್ತು ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಗೆಜ್ಜೆಗಿರಿ ಕ್ಷೇತ್ರ, ಕಟಪಾಡಿ ವಿಶ್ವನಾಥ ಕ್ಷೇತ್ರಗಳ ಆಡಳಿತ ಸಮಿತಿ ಅಧ್ಯಕ್ಷರು ಸೇರಿಕೊಂಡು ತಳೆದಿರುವ ನಿರ್ಧಾರ ಇದು. ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲು ಸರಕಾರದಿಂದ ಸಿಗುವ ಶೇಡವಾರು ಮೀಸಲಾತಿ ಅವಶ್ಯಕತೆ ಇದೆ ಎಂದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜಯರಾಜ್ ಎಚ್ ಸೋಮಸುಂದರಂ, ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಮಹೇಶ್ ಅಂಚನ್, ಗೆಜ್ಜೆಗಿರಿ ಕ್ಷೇತ್ರದ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಕಾರ್ಯದರ್ಶಿ ಗಂಗಾಧರ ಪೂಜಾರಿ, ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಬಿಲ್ಲವ ಸಮಾಜಸೇವಾ ಸಂಘ ಉಡುಪಿ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಪರಮೇಶ್ವರ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article