ಧ್ವನಿವರ್ಧಕ ಬಳಕೆಗೆ ಮಿತಿ ಹೇರಿಕೆ: ವಿನಾಯಿತಿಗೆ ಮನವಿ
ಮಂಗಳೂರು: ನಾಟಕ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಬಳಕೆಗೆ ಮಿತಿ ಹೇರಿಕೆ ಹಾಗೂ ರಾತ್ರಿ 10 ಗಂಟೆಗೆ ಕಾರ್ಯಕ್ರಮ ನಿಲ್ಲಿಸಬೇಕು ಎಂಬ ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶದಿಂದ ನಾಟಕ ಕಲಾವಿದರು ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾಟಕಗಳಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅವಕಾಶ ನೀಡಬೇಕು ಹಾಗೂ ರಾತ್ರಿ ಸಮಯದ ಮಿತಿಗೆ ವಿನಾಯಿತಿ ನೀಡುವಂತೆ ಜಿಲ್ಲಾಡಳಿತವನ್ನು ಮಂಗಳೂರಿನ ತುಳುನಾಟಕ ಕಲಾವಿದರ ಒಕ್ಕೂಟ ವಿನಂತಿಸಿದೆ.
ಗಣೇಶ ಹಬ್ಬ ಪ್ರಾರಂಭವಾಗುವ ಸಂದರ್ಭದಲ್ಲಿ ಧ್ವನಿವರ್ಧಕ ಒದಗಿಸುವವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಒದಗಿಸಲು ಜಿಲ್ಲಾಡಳಿತದ ಆದೇಶದಿಂದಾಗಿ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಹಲವರಿಗೆ ನೋಟೀಸ್ ನೀಡಿ, ಧ್ವನಿವರ್ಧಕ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಿ ಕೇಸು ದಾಖಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ನಾಟಕ ತಂಡಗಳು ನಾಟಕ ಪ್ರದರ್ಶನ ನೀಡಲು ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಕಲಾವಿದರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕಾನೂನಿನಲ್ಲಿ ವಿನಾಯಿತಿ ನೀಡಬೇಕು ಎಂದು ತುಳು ನಾಟಕ ಕಲಾವಿದರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಸುಮಾರು ೭೫ಕ್ಕೂ ಮಿಕ್ಕಿ ನಾಟಕ ತಂಡಗಳಿದ್ದು, 3000ಕ್ಕೂ ಮಿಕ್ಕಿ ಕಲಾವಿದರು, ತಂತ್ರಜ್ಞರು, ಸಂಗೀತಗಾರರು, ಪ್ರಸಾದನ, ವೇಷಭೂಷಣ, ನೃತ್ಯಜೋಡಣೆ ಮುಂತಾದ ನಾಟಕ ಸಂಬಂಽ ಕೆಲಸಗಳಲ್ಲಿ ಜೀವನ ನಿರ್ವಹಣೆ ಮಾಡಿಕೊಂಡು ನಾಟಕವನ್ನೇ ನಂಬಿಕೊಂಡು ಬದುಕುವವರಿರುತ್ತಾರೆ. ಗಣೇಶ ಹಬ್ಬದಿಂದ ತೊಡಗಿ ಮೇ ತಿಂಗಳ ಅಂತ್ಯದವರೆಗೆ ನಿರಂತರ ನಾಟಕ ಪ್ರದರ್ಶನಗಳು ನಡೆಯುತ್ತಿರುತ್ತವೆ. ನಾಟಕಗಳು ಪ್ರೇಕ್ಷಕರನ್ನು ತಲುಪಬೇಕಾದರೆ ಧ್ವನಿವರ್ಧಕಗಳ ಅತ್ಯವಶ್ಯ. ನಾಟಕ, ಯಕ್ಷಗಾನ, ಸಂಗೀತ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನಗಳು ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕಾದರೆ ಧ್ವನಿವರ್ಧಕದ ಬಳಕೆ ಬಹು ಮುಖ್ಯ ಪಾತ್ರವಹಿಸುತ್ತದೆ. ಇದೀಗ ರಾತ್ರಿ 10.30ಕ್ಕೆ ಯಾವುದೇ ಕಾರ್ಯಕ್ರಮ ಮುಗಿಸಲು ಸಾಧ್ಯವಾಗುವುದಿಲ್ಲ. ಒಂದು ನಾಟಕ ಪ್ರಾರಂಭವಾದರೆ ಅರ್ಧದಲ್ಲಿ ನಾಟಕ ನಿಲ್ಲಿಸುವುದು ಸರಿಯಲ್ಲ. ತುಳುನಾಡಲ್ಲಿ ನಾಟಕ, ಯಕ್ಷಗಾನ, ನೇಮಕೋಲ ನಡೆಯುವುದೇ ರಾತ್ರಿ ಹೊತ್ತಲ್ಲಿ. ಈ ಎಲ್ಲಾ ಉತ್ಸವಗಳಿಗೆ ಸಮಯದ ಮಿತಿ ಹಾಗೂ ಶಬ್ದ ಬಳಕೆಯ ಮಿತಿ ಹೇರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಽಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ನಾಟಕಗಳಿಗೆ ಪೂರಕವಾದ ಧ್ವನಿ ಬಳಕೆ, ಸಂಗೀತ ಬಳಕೆಗೆ ನಿಗದಿಪಡಿಸಿರುವ 50-65 ಡಿಸಿಬಲ್ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವೇ? ಬೆಂಗಳೂರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಈ ಮಿತಿ ಹೇರಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರವೂ ನಾಟಕ ಪ್ರದರ್ಶನ ನಿಲ್ಲಿಸಿದ್ದಾರೆ. ನಾಳೆ ದೈವದ ಕೋಲವನ್ನೂ ನಿಲ್ಲಿಸುವಂತೆ ಹೇಳಬಹುದು. ತುಳುನಾಡಿನ ಸಂಪ್ರದಾಯ, ಆಚರಣೆ ಉಳಿಯಲು ಜಿಲ್ಲಾಡಳಿತ ನಿಯಮದಲ್ಲಿ ಸಡಿಲಿಕೆ ಮಾಡಬೇಕು ಎಂದು ಆಗ್ರಹಿಸಿದರು.
ನಟ ದೇವದಾಸ್ ಕಾಪಿಕಾಡ್ ಮಾತನಾಡಿ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡದಿರುವ ಮೂಲಕ ದಕ್ಷಿಣ ಕನ್ನಡ ಶಾಪಗ್ರಸ್ತ ಜಿಲ್ಲೆಯಾಗಿದೆ. ನನ್ನ ರಂಗಭೂಮಿಯ ಅನುಭವದಲ್ಲಿ ಯಾವತ್ತೂ ಈ ರೀತಿ ಆಗಿಲ್ಲ. ಕಲಾವಿದರ ಈ ಸಂಕಷ್ಟಕ್ಕೆ ಜನಪ್ರತಿನಿಽಗಳು ಸ್ಪಂದಿಸಬೇಕು ಎಂದರು.
ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ ಅಧ್ಯಕ್ಷ ಲಂಚುಲಾಲ್, ತುಳು ನಾಟಕ ಕಲಾವಿದರ ಒಕ್ಕೂಟ ಉಪಾಧ್ಯಕ್ಷ ಗೋಕುಲ್ ಕದ್ರಿ ಉಪಸ್ಥಿತರಿದ್ದರು.