ಮಂಗಳೂರು: ಐಸಿಎಸ್‌ಇ ಮತ್ತು ಸಿಬಿಎಸ್‌ಇ ಒಕ್ಕೂಟದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಶಾಲೆಗಳ ಪ್ರಾಂಶುಪಾಲರ ದ್ವೈ ಮಾಸಿಕ ಸಭೆಯು ಮಂಗಳೂರಿನ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿರುವ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಇಂದು ನಡೆಯಿತು.
ಮುಖ್ಯ ಅತಿಥಿಯಾಗಿ ಮಂಗಳೂರಿನ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫರೂಕಿ ಭಾಗವಹಿಸಿ, ಟ್ರಾಫಿಕ್ ನಿಯಮಗಳ ಬಗ್ಗೆ ಮಾತನಾಡಿ, ಪೋಷಕರು ತಮ್ಮ ತಮ್ಮ ಮಕ್ಕಳನ್ನು ಶಾಲಾ ಆರಂಭದ ಸಮಯಕ್ಕೆ ಮುನ್ನವಾಗಿ ಕರೆ ತರುವ ಬದಲು ಶಾಲೆಯ ಘಂಟೆ ಬಾರಿಸುವಾಗ ಗಾಡಿಗಳಲ್ಲಿ ಕರೆತರುತ್ತಾರೆ. ಇದು ಶಾಲಾ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಗರದ ಯಾವುದೇ ರಸ್ತೆಗಳಿರಬಹುದು, ಹೆದ್ದಾರಿಗಳಿರಬಹುದು, ಅಲ್ಲಿ ಕಾಣಸಿಗುವ ಟ್ರಾಫಿಕ್ ಚಿಹ್ನೆಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.
ಮಂಗಳೂರು ಅಭಿವೃದ್ಧಿ ಹೊಂದಿದೆ ಆದರೆ ರಸ್ತೆಗಳು ಎಂದಿನಂತೆ ಹಾಗೆ ಇರುತ್ತದೆ ಇದನ್ನು ತಿಳಿದರೂ ಜನ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸುತ್ತಿದ್ದಾರೆ. ಮಂಗಳೂರಿನ ಶಾಲೆಗಳು ಟ್ರಾಫಿಕ್ ವಿಷಯಕ್ಕೆ ಸಂಬಂಧಿಸಿ ನಮ್ಮೊಂದಿಗೆ ವ್ಯವಹರಿಸಿಬಹುದು. ಪೋಷಕರಿಗೆ ಸರಿಯಾದ ಸಂದೇಶ ಕಳುಹಿಸಬೇಕು ತಮ್ಮ ಮಕ್ಕಳನ್ನು ಎಲ್ಲಿ ಬಿಡಬೇಕು. ಮಕ್ಕಳು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದಾಗಿ ಪ್ರತಿಜ್ಞೆಯನ್ನು ಸ್ವೀಕರಿಸುವಂತೆ ಮಾಡಿ. ದ್ವಿಚಕ್ರದಲ್ಲಿ ಹೋಗುವಾಗ ತಂದೆ ತಾಯಿ ಇಬ್ಬರು ಕೂಡ ಹೆಲ್ಮೆಟ್ ಧರಿಸಬೇಕೆಂದು ಮಕ್ಕಳಿಗೆ ತಿಳಿಸಿ, ಮತ್ತು ಕಾರ್‌ನಲ್ಲಿ ಹೋಗುವಾಗಲೂ ಕೂಡ ಸೀಟ್ ಬೆಲ್ಟ್ ಅನ್ನು ಧರಿಸಬೇಕೆಂಬುದನ್ನು ತಿಳಿಸಿ, ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಬೇಕಾಗಿರುವುದು ನಮ್ಮ ಸುರಕ್ಷತೆಯ ದೃಷ್ಟಿಯಿಂದ ಎಂಬುದನ್ನು ತಿಳಿಸಿದರು.
ಖಾಸಗಿ ಕೆಲಸ ಕಾರ್ಯಗಳಿಗಾಗಿ ವೈಟ್ ಬೋರ್ಡ್ ನಂಬರ್ ಪ್ಲೇಟ್ ಇರುವ ಕಾರ್‌ಗಳನ್ನು ಬಳಸಬೇಕು. ಟ್ರಾಫಿಕ್ ಸಿಬ್ಬಂದಿಯವರಿಗೆ ಸಹಕಾರ ನೀಡುವ ಉದ್ದೇಶದಿಂದ ಯಾರಿಗಾದರೂ ಆಸಕ್ತಿ ಇದ್ದರೆ ಸ್ವಯಂ ಇಚ್ಛೆಯಿಂದ ಬಂದು ಟ್ರಾಫಿಕ್‌ಗಳನ್ನು ನಿಯಂತ್ರಿಸಲು ನಮ್ಮೊಂದಿಗೆ ಕೈ ಜೋಡಿಸಬಹುದು ಎಂದು ಟ್ರಾಫಿಕ್ ನಿಯಮಗಳ ಪಾಲನೆಯ ಪ್ರಾಮುಖ್ಯತೆಯ ಕುರಿತು ತಿಳಿಸಿಕೊಟ್ಟರು.
ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಮಾತನಾಡಿ, ನಮ್ಮ ಮಕ್ಕಳನ್ನು ದೇಶದ ಸಂಪತ್ತನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮಕ್ಕಳಲ್ಲಿ ಶಿಸ್ತಿನ ಕೊರತೆ ಇದ್ದಾಗ ಮಕ್ಕಳು ದೇಶಕ್ಕೆ ಮಾರಕವಾಗಿ ಬೆಳೆಯುತ್ತಾರೆ. ವಿದ್ಯೆಯೇ ಎಲ್ಲಾ, ವಿದ್ಯೆಯನ್ನು ಯಾರು ಕದಿಯಲು ಆಗುವುದಿಲ್ಲ, ಇದನ್ನರಿತು ನಾವು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ನಾವು ತಂತ್ರಜಗ್ಯಾನದಲ್ಲಿ ತುಂಬಾ ಮುಂದುವರೆದಿದ್ದೇವೆ. ಆದರೆ ಶಿಸ್ತು, ನಿಯಮ ಪಾಲನೆಯಲ್ಲಿ ಹಿಂದಿದ್ದೇವೆ. ಮಕ್ಕಳನ್ನು ಪ್ರೀತಿಯಿಂದ ನೋಡುತ್ತಾ, ಅವರಲ್ಲಿ ಶಿಸ್ತು ಸಂಯಮಗಳನ್ನು ತುಂಬಿಸುತ್ತಾ ದೇಶದ ಸಂಪತ್ತನ್ನಾಗಿಸಿ ಎಂದು ಬೇಡುತ್ತಾ ಈ ಸಭೆಗೆ ಆಗಮಿಸಿದ ಎಲ್ಲ ಶಾಲಾ ಪ್ರಾಂಶುಪಾಲಾರಿಗೆ ಶುಭವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಶಾಲೆಗಳ 70ಕ್ಕೂ ಅಧಿಕ ಪ್ರಾಂಶುಪಾಲರು ಭಾಗವಹಿದ್ದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಎಐಸಿಎಸ್‌ನ ಅಧ್ಯಕ್ಷೆ ಅಭಿಲಾಶ ಎಸ್., ಕಾರ್ಯದರ್ಶಿ ದೇಚಮ್ಮ ಟಿ.ಎಂ., ಖಜಾಂಜಿ ಫಾದರ್ ಜಾನ್ಸನ್ ಏಲ್ ಸಿಕ್ವೆರ, ಮಂಗಳೂರಿನ ಕ್ರೀಡಾ ಕಾಯದರ್ಶಿಗಳಾಗಿರುವ ಶ್ರೀ ಸುರೇಶ ಮಹಾಲಿಂಗಪುರ್, ಉಡುಪಿ ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾಗಿರುವ ರೆವರೆಂಡ್ ಫಾದರ್ ರಾಲ್ವಿನ್ ಅರನ್ಹ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು.
ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿ, ಶಿಕ್ಷಕಿ ಚೇತನಾ ನಿರೂಪಿಸಿದರು.