
ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿಗೆ ಜಾಮೀನು ಮಂಜೂರು
ಮಂಗಳೂರು: ನಗರದ ಹೊರ ವಲಯದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
15 ವರ್ಷದ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ನಡೆಸಿದ ಪ್ರಕರಣ ಮಂಗಳೂರಿನ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂದೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೧137(2), ಸೆಕ್ಷನ್ 65 ಮತ್ತು 351ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಯು ಸಂತ್ರಸ್ತೆಯನ್ನು ತನ್ನ ಮೊಬೈಲ್ ನಲ್ಲಿ ಇನ್ಸ್ಟಗ್ರಾಂ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಪುಸಲಾಯಿಸಿ ಉಡುಪಿ ಜಿಲ್ಲೆಯ ವಿಹಾರತಾಣಕ್ಕೆ ಕರೆದೊಯ್ದು ಲೈಂಗಿಕವಾಗಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಸಂತ್ರಸ್ತ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಗಿತ್ತು. ಸಂತ್ರಸ್ತೆ ಗರ್ಭಿಣಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಸೂಕ್ತ ಕಾನೂನು ರಕ್ಷಣೆ ನೀಡಲಾಗಿತ್ತು.
ಆರೋಪಿಯ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ- ಎಫ್.ಟಿ.ಎಸ್.ಸಿ ಇದರ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರವಾಗಿ ಸುಕೇಶ್ ಕುಮಾರ್ ಶೆಟ್ಟಿ ಅವರು ವಾದ ಮಂಡಿಸಿದ್ದರು.