ಬಡತನದ ಅರಿವು ಸಹಿತ ಸಂಸ್ಕಾರ, ವಿನಯಶೀಲತೆ ಮಕ್ಕಳಲ್ಲಿರಲಿ: ಡಾ. ಮಹೇಶ್ ಕುಮಾರ್ ಸಾಣೂರು
ಕಾಳಿಕಾಂಬಾ ಸೇವಾಸಮಿತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರಾವಣ ಮಾಸದ ವಿಶೇಷ ಪುಷ್ಪಪೂಜೆಯಂಗವಾಗಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ ವತಿಯಿಂದ
ಏರ್ಪಡಿಸಲಾದ ತಾಳಮದ್ದಳೆ ಕಾರ್ಯಕ್ರಮದ ಅರಂಭದಲ್ಲಿ ಸಂಯೋಜಿಸಲಾದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಎಂದರೆ ಸುವರ್ಣ ಜೀವನ ಎಂದು ತಿಳಿದು ಸ್ವಚ್ಛಂದವಾಗಿ, ಮೋಜು ಮಸ್ತಿ ಮಾಡುವುದಲ್ಲ, ತಮ್ಮ ಆಯ್ಕೆಯ ಶಿಕ್ಷಣವನ್ನು ಫಲದಾಯಕವಾಗಿ ತಮ್ಮದಾಗಿಸಿಕೊಳ್ಳುವ ಬದ್ಧತೆ, ಶ್ರದ್ಧೆ, ಪರಿಶ್ರಮ ನಿಮಗಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಇಂದು ವಿದ್ಯಾರ್ಥಿ ವೇತನ ಸ್ವೀಕರಿಸಿದವರು ಮುಂದೆ ತಮ್ಮ ಜೀವನದಲ್ಲಿ ಹೀಗೆಯೇ ಶಿಕ್ಷಣಾರ್ಥಿಗಳಿಗೆ ಸಹಾಯ ಹಸ್ತ ಚಾಚಲು ಮುಂದಾಗಬೇಕು ಎಂದು ಕರೆ ನೀಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಹತ್ತು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮೊಕ್ತೇಸರರಾದ ಉಳಿಯ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಸೇವಾ ಸಮಿತಿ ಆಧ್ಯಕ್ಷ ಶ್ರೀನಾಥ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಎಸ್. ಆಚಾರ್ಯ ಶುಭ ಹಾರೈಸಿದರು. ಕಾಳಿಕಾಂಬಾ ಸೇವಾ ಸಮಿತಿ ಆಧ್ಯಕ್ಷ ಶ್ರೀನಾಥ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಸುಧಾಕರ ಆಚಾರ್ಯ ಹೊಸಬೆಟ್ಟು ವಂದಿಸಿದರು. ಜಗದೀಶ ಆಚಾರ್ಯ ಬೇಲಾಡಿ ನಿರೂಪಿಸಿದರು.
ಬಳಿಕ ನಡೆದ `ಸತ್ವ ಪರೀಕ್ಷೆ' ಯಕ್ಷಗಾನ ತಾಳಮದ್ದಳೆಯಲ್ಲಿ ಜನ್ಸಾಲೆ, ಶಶಾಂಕ್, ಪ್ರಜ್ವಲ್ ಮುಂಡಾಡಿ, ಸುಣ್ಣಂಬಳ, ವಾ. ರಂಗಾಭಟ್, ಡಾ. ವಾದಿರಾಜ ಕಲ್ಲೂರಾಯ, ಡಾ. ಮಹೇಶ್ ಸಾಣೂರು, ದಿನೇಶ್ ಶರ್ಮ ಕೊಯ್ಯೂರು ಭಾಗವಹಿಸಿದ್ದರು. ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಕೋರಿಕೆಯಂತೆ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬುತ್ತಿರುವ ಸಂಧರ್ಭವನ್ನು ಉಲ್ಲೇಖಿಸಿ, ಡಾ. ಸೋಂದಾ ನಾರಾಯಣ ಭಟ್ಟರು ಬರೆದ, ಸಂಘದ ಕುರಿತಾದ `ಗೆಲುದನಿಯು ಗುಡುಗುಡುಗಿ, ಸೋಲು ಸೊಲ್ಲಡಗಿ ನಾಳೆಗಳು ನಮದೆನಿಸಿವೆ' ಹಾಡನ್ನು ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರು ಹಾಡುವ ಮೂಲಕ ತಾಳಮದ್ದಳೆಗೆ ಚಾಲನೆ ನೀಡಿದರು.