ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ‘ಫಿಲೋ ಪ್ರತಿಭಾ-2025’ ಪ್ರೌಢ ಶಾಲಾ ಮಟ್ಟದ ಸ್ಪರ್ಧೆಯ ಪ್ರಶಸ್ತಿ ವಿತರಣೆ ಮತ್ತು ಸಮಾರೋಪ ಸಮಾರಂಭ
ಮುಖ್ಯ ಅತಿಥಿಗಳಾಗಿ ಕೋಡಂಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಗೀತಾ ಕುಮಾರಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸೋಲೆ ಗೆಲುವಿನ ಸೋಪಾನ. ಸೋತರು ಕುಗ್ಗದೆ ಮುನ್ನಡೆಯಬೇಕು. ಭಾಗವಿಸುವಿಕೆ ಅಗತ್ಯ, ದೇವರಲ್ಲಿ ನಂಬಿಕೆ ಇಟ್ಟು ಆತ್ಮ ವಿಶ್ವಾಸದಿಂದ ಮುನ್ನಡೆದರೆ ಗೆಲುವು ನಿಮ್ಮದಾಗುವುದು ಎಂದು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಎಲ್ಲರಿಗೂ ಶುಭ ಹಾರೈಸಿದರು.
ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ದಿವ್ಯಾ ಅನಿಲ್ ರೈ, ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಹಾಗೂ ‘ಫಿಲೋ ಪ್ರತಿಭಾ-2025’ರ ಸಂಯೋಜಕಿ ಸುಮಾ ಪಿ.ಆರ್ ಉಪಸ್ಥಿತರಿದ್ದರು.
ಈ ಬಾರಿಯ ‘ಫಿಲೋ ಪ್ರತಿಭಾ-2025’ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಸ್ಥಾನವನ್ನು ಹಾಗೂ ಪುತ್ತೂರು ಸೈಂಟ್ ವಿಕ್ಟರ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ದಕ್ಷಿಣ ಕನ್ನಡ ಜಿಲ್ಲೆಯ 36 ಪ್ರೌಢಶಾಲೆಗಳ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರಸಪ್ರಶ್ನೆ, ಇಂಗ್ಲಿಷ್ ವಿಚಾರ ಸಂಕಿರಣ, ಪೆನ್ಸಿಲ್ ಸ್ಕೆಚ್, ಮಣ್ಣಿನ ಮಾದರಿ ತಯಾರಿ, ವಿಜ್ಞಾನ ಮಾದರಿ ತಯಾರಿ, ದೇಶ ಭಕ್ತಿ ಗಾಯನ, ಕೊಲಾಜ್ ತಯಾರಿಕೆ, ತ್ಯಾಜ್ಯದಿಂದ ಉಪಯುಕ್ತ ವಸ್ತು ತಯಾರಿ, ಫೇಸ್ ಪೈಂಟಿಂಗ್, ಛದ್ಮ ವೇಷ, ಲಾಂಚಿಂಗ್ ಪ್ರಾಡಕ್ಟ್, ಕನ್ನಡ ಕಂಠ ಪಾಠ, ರಂಗೋಲಿ ಹಾಗೂ ಜಾನಪದ ನೃತ್ಯ ಹೀಗೆ 14 ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಉಷಾ ಎ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಫಿಲೋ ಪ್ರತಿಭಾ-2025 ರ ಸಂಯೋಜಕ ರೋಹಿತ್ ಕುಮಾರ್ ಟಿ. ವಂದಿಸಿದರು.

