ಪುತ್ತೂರು ‘ಶಾಸಕರ ಕಚೇರಿ’ ಭ್ರಷ್ಟಾಚಾರದ ಮೂಲ- ಮಾಜಿ ಶಾಸಕ ಮಠಂದೂರು ಆರೋಪ

ಪುತ್ತೂರು ‘ಶಾಸಕರ ಕಚೇರಿ’ ಭ್ರಷ್ಟಾಚಾರದ ಮೂಲ- ಮಾಜಿ ಶಾಸಕ ಮಠಂದೂರು ಆರೋಪ

ಪುತ್ತೂರು: ಅಭಿವೃದ್ಧಿಯಲ್ಲಿ ಹೆಸರು ಮಾಡಬೇಕಾದ ಪುತ್ತೂರು ಈಗ ಲಂಚ-ಭ್ರಷ್ಟಾಚಾರದಲ್ಲಿ ಪ್ರಚಾರ ಗಳಿಸುತ್ತಿದೆ. ಅಕ್ರಮಸಕ್ರಮ ಕಡತ ಶಾಸಕರ ಕಚೇರಿಗೆ ಹೋಗಿ ಬಳಿಕ ತಹಶೀಲ್ದಾರ್ ಕಚೇರಿಗೆ ಬರುವಂತಹ ಕ್ರಮ ಯಾವತ್ತೂ ಇರಲಿಲ್ಲ. ಆದರೆ ಪುತ್ತೂರಿನಲ್ಲಿ ಇದು ನಡೆಯುತ್ತಿದೆ. ಹಾಗಾಗಿ ಭ್ರಷ್ಟಾಚಾರದ ಮೂಲ ಶಾಸಕರ ಕಚೇರಿಯೇ ಆಗಿದೆ. ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದರು. 

ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಭ್ರಷ್ಟಾಚಾರ- ಲಂಚ ಹಿಂದೆಯೂ ಇತ್ತು. ನಾನು ಶಾಸಕನಾಗಿದ್ದಾಗ ತಹಶೀಲ್ದಾರ್ ಡಾ.ಪ್ರದೀಪ್ ಅವರು ನಡೆಸುತ್ತಿರುವ ಭ್ರಷ್ಠಾಚಾರಕ್ಕೆ ಲೋಕಾಯುಕ್ತಕ್ಕೆ ಹಿಡಿಸಿಕೊಡುವ ಮೂಲಕ ಉತ್ತರ ನೀಡಿದ್ದೆ. ಆದರೆ ಲೋಕಾಯುಕ್ತ ದಾಳಿ ಮಾಡಿದಾಗ ತಹಶೀಲ್ದಾರ್ ಪರಾರಿಯಾಗಿರುವುದು ಪುತ್ತೂರಿನಲ್ಲಿ ಪ್ರಥಮ. ಪುತ್ತೂರಿನ ಶಾಸಕರು ಬಿಜೆಪಿಯವರು ಭ್ರಷ್ಠಾಚಾರ ಮಾಡಿದ್ದಾರೆ. ಅಕ್ರಮ-ಸಕ್ರಮದಲ್ಲಿ ಭ್ರಷ್ಟಾಚಾರ ಆಗಿದೆ ಎಂದಾಗ ಜನ ಅದನ್ನು ನಂಬಿದ್ದರು. ಆದರೆ ಲೋಕಾಯುಕ್ತದಲ್ಲಿ ಟ್ರ್ಯಾಪ್ ಆಗಿ ಜೈಲು ಶಿಕ್ಷೆ ಅನುಭವಿಸಿ ಬಂದ ತಹಶೀಲ್ದಾರ್ ಅಕ್ರಮಸಕ್ರಮ 94ಸಿ-94ಸಿಸಿಯಲ್ಲಿ ಎಷ್ಟು ನ್ಯಾಯಕೊಟ್ಟಿರಬಹುದು ಎಂಬುವುದನ್ನು ಯೋಚನೆ ಮಾಡಬೇಕಾಗಿದೆ. ಅರ್ಜಿದಾರರಿಗೆ ಈ ನಿಕಟಪೂರ್ವ ತಹಶೀಲ್ದಾರ್ ರಾತ್ರಿ ಬೆಳಗೆಯಾಗುವಾಗ ಸಾಗುವಳಿಚೀಟಿ ಹಕ್ಕುಪತ್ರ ಮಾಡಿಕೊಟ್ಟಿದ್ದಾರೆ. ಲೋಕಾಯುಕ್ತ ಈ ತಹಶೀಲ್ದಾರ್ ಮಾಡಿರುವ ಅಕ್ರಮಸಕ್ರಮ ಮಂಜೂರಾತಿಯ ಬಗ್ಗೆ ತನಿಖೆ ಮಾಡಬೇಕು. ಆಗ ಸತ್ಯ ಬಹಿರಂಗವಾಗುತ್ತದೆ ಎಂದವರು ಹೇಳಿದರು.  

ಲೋಕಾಯುಕ್ತ ದಾಳಿ ಸಂದರ್ಭ ತಹಶೀಲ್ದಾರ್ ಪರಾರಿಯಾಗಿ ರಕ್ಷಣೆಗಾಗಿ ಶಾಸಕ ಮನೆಗೆ ಅಥವಾ ಕಚೇರಿಗೆ ಹೋಗಿರಬಹುದು. ಶಾಸಕರ ಕಚೇರಿಗೆ ಈ ಕಡತಗಳು ಹೋಗುವುದಕ್ಕೂ ಇದಕ್ಕೂ ಸಂಬಂಧ ಇರಬಹುದು. ಶಾಸಕರ ಅಧ್ಯಕ್ಷತೆಯಲ್ಲಿನ ಅಕ್ರಮಸಕ್ರಮ ಸಮಿತಿ ಮಂಜೂರು ಮಾಡಿದ ಬಳಿಕ ಮತ್ತೆ ಕಡತ ಶಾಸಕರ ಕಚೇರಿಗೆ ಹೋಗುವ ಅಗತ್ಯವೇನಿದೆ. ಇದರ ಮರ್ಮವೂ ಹೊರಬರಬೇಕಾಗಿದೆ. ಪುತ್ತೂರಿನಲ್ಲಿ ಭ್ರಷ್ಟಾಚಾರದ ಪೋಷಣೆಯಾಗುತ್ತಿದೆ ಎಂಬುವುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಬಿಜೆಪಿಗೆ ಬರುವುದಾದರೆ ಸ್ವಾಗತ..

ಪುತ್ತೂರಿನ ಶಾಸಕರು ಬಿಜೆಪಿಯನ್ನು ದೂರುವುದಿಲ್ಲ ಎನ್ನುತ್ತಿದ್ದಾರೆ. ಬಿಜೆಪಿ ಪಕ್ಷ ಒಂದು ಸಮುದ್ರವಾಗಿದೆ. ದೇಶದ್ರೋಹಿಗಳು, ಧರ್ಮದ್ರೋಹಿಗಳನ್ನು ಹೊರತು ಪಡಿಸಿ ಎಲ್ಲರನ್ನೂ ಬಿಜೆಪಿ ಸ್ವಾಗತಿಸುತ್ತದೆ. ಒಂದು ವೇಳೆ ಶಾಸಕರು ಬಿಜೆಪಿಗೆ ಬರುವುದಾದರೂ ಸ್ವಾಗತ. ಆದರೆ ನಾನು ಅವರಿಗೆ ‘ಅಡ್ಡ’ ವಾಗುತ್ತೇನೆ ಎಂಬ ಕಾರಣಕ್ಕಾಗಿ ಶಾಸಕರು ನನ್ನನ್ನು ವಿರೋಧಿಸುತ್ತಿದ್ದಾರೆ ಎಂದವರು ಹೇಳಿದರು. 

ಸ್ವಾತಂತ್ರ್ಯ ಹರಣ:

ರಾಜ್ಯ ಸರ್ಕಾರವು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. ರಾತ್ರಿ 10 ಗಂಟೆಯ ಬಳಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುತ್ತಿದೆ. ಜಿಲ್ಲೆಯಲ್ಲಿ ಸರ್ಕಾರ ಕಾನೂನು ಮಾಡುತ್ತಿದೆಯೋ ಅಥವಾ ಪೊಲೀಸರು ಮಾಡುತ್ತಿದ್ದಾರೆಯೋ ಎಂಬ ಅನುಮಾನವಿದೆ. ಬಹು ಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ತಡೆಯುವ ಪಿತೂರಿ ಸರ್ಕಾರದಿಂದ ನಡೆಯುತ್ತಿದೆ ಎಂದವರು ಹೇಳಿದರು. 

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶಶಿಧರ್ ನಾಯಕ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article