ವಕೀಲರ ನಿಯೋಗ ಧರ್ಮಸ್ಥಳ ಭೇಟಿ
Sunday, August 24, 2025
ಉಜಿರೆ: ಬೆಂಗಳೂರಿನ ವಕೀಲರಾದ ನಾರಾಯಣ ಸ್ವಾಮಿ ಮತ್ತು ರಮೇಶ್ ಗೌಡರು ಮತ್ತು ಹಾಸನದ ವಕೀಲರ ಸಂಘದ ಅಧ್ಯಕ್ಷ ಮೊಗಣ್ಣ ಗೌಡ ನೇತೃತ್ವದಲ್ಲಿ 450 ಮಂದಿ ವಕೀಲರ ನಿಯೋಗ 90 ಕಾರುಗಳ ಜಾಥಾದಲ್ಲಿ ಶನಿವಾರ ಸಂಜೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನ್ಯಾಯವೇ ದೇವರು. ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿ ನ್ಯಾಯದಾನ ಪದ್ಧತಿ ಅಳವಡಿಸಲಾಗಿದೆ. ನ್ಯಾಯ ನಮ್ಮ ಅಸ್ಮಿತೆಯಾಗಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರದಿಂದ ತಮಗೆಲ್ಲರಿಗೂ ತೀವ್ರ ಖೇದವಾಗಿದೆ. ಆಧಾರರಹಿತ ಅಪಪ್ರಚಾರ ತಡೆಯಲು ತಾವು ಕೂಡಾ ಪ್ರಯತ್ನಿಸುವುದಾಗಿ ತಿಳಿಸಿದ ಅವರು ಸತ್ಯ, ಧರ್ಮ, ನ್ಯಾಯದ ಪರಿಪಾಲನೆಗೆ ತಾವೆಲ್ಲರೂ ಹೆಗ್ಗಡೆಯವರ ಜೊತೆ ಬದ್ಧರಾಗಿದ್ದೇವೆ ಎಂದು ವಕೀಲರುಗಳ ನಿಯೋಗದವರು ಭರವಸೆ ನೀಡಿದರು.
ಧರ್ಮಸ್ಥಳದಲ್ಲಿ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ನಡೆಯುತ್ತವೆ: ಡಾ. ಡಿ. ವೀರೇಂದ್ರ ಹೆಗ್ಗಡೆ
ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಧರ್ಮಸ್ಥಳದಲ್ಲಿ ಕಳೆದ ಎಂಟು ಶತಮಾನಗಳಿಂದ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯದಾನಗಳು ಜಾತಿ-ಮತ ಬೇಧವಿಲ್ಲದೆ ನಿತ್ಯವೂ ನಡೆಯುತ್ತಿದೆ. ಇವುಗಳಲ್ಲಿ ನೊಂದವರಿಗೆ, ಸೋತವರಿಗೆ ‘ಭಯ’ ಪಡಬೇಡಿ ಎಂದು ನೀಡುವ ‘ಅಭಯದಾನ’ ಅತ್ಯಂತ ಶ್ರೇಷ್ಠವಾಗಿದ್ದು, ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳು, ಸೇವಾಕಾರ್ಯಗಳು, ದಾನ, ಧರ್ಮಾದಿ ಸತ್ಕಾರ್ಯಗಳು ಟ್ರಸ್ಟ್‌ಗಳ ಮೂಲಕ ಪಾರದರ್ಶಕವಾಗಿ ನಡೆಯುತ್ತವೆ ಎಂದು ಹೆಗ್ಗಡೆಯವರು ವಕೀಲರುಗಳಿಗೆ ಮಾಹಿತಿ ನೀಡಿದರು.
ಬೆಂಗಳೂರು, ಮೈಸೂರು ಮತ್ತು ಹಾಸನದಿಂದ ಬಂದ ವಕೀಲರುಗಳು ಬಳಿಕ ದೇವರ ದರ್ಶನ ಮಾಡಿ, ಅನ್ನಪೂರ್ಣದಲ್ಲಿ ಪ್ರಸಾದ ಸ್ವೀಕರಿಸಿ ಊರಿಗೆ ಮರಳಿದರು.









