ಮೃತರ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ವತಿಯಿಂದ ಪರಿಹಾರ
ಅಟೋ ಚಾಲಕ ಹೈದರ್ ಅವರ ಮೃತ ದೇಹವನ್ನು ಕಿನ್ಯ ಮೀನಾದಿ ಹಾಗೂ ಮೃತ ನಫೀಸ ಅವರ ಅತ್ತೆಯ ಮೃತ ದೇಹ ಫರಂಗಿಪೇಟೆ ಮಸೀದಿ ಬಳಿ ದಪನ ಕಾರ್ಯ ನಡೆಯಿತು.
ಅಜ್ಜಿನಡ್ಕ ನಿವಾಸಿ ಖದೀಜ(60), ಸೋದರಿ ನಫೀಸ (52), ನಫೀಸರವರ ಪುತ್ರಿ ಆಯಿಷಾ ಪಿದಾ (19), ನಫೀಸರ ಸಹೋದರ ಶಾಹುಲ್ ಹಮೀದ್‌ರ ಪುತ್ರಿ ಹಸ್ನ (11) ಅವರನ್ನು ಅಜ್ಜಿನಡ್ಕ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿದ ಬಳಿಕ ಕಲ್ಲಾಪು ಪಟ್ಲ ಬಳಿ ಇರುವ ದಫನ ಭೂಮಿಯಲ್ಲಿ ಧಪನ ಕಾರ್ಯ ನಿರ್ವಹಿಸಿದರು.
ಸ್ಪೀಕರ್ ಯು.ಟಿ. ಖಾದರ್, ಮಂಜೇಶ್ವರ ಶಾಸಕ ಅಶ್ರಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ, ಹರ್ಷಾದ್ ವರ್ಕಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡ ಅಶ್ರಫ್, ಪದ್ಮರಾಜ್ ಪೂಜಾರಿ,ಕೋಟೆಕಾರ್ ಪ.ಪಂ. ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಸಹಿತ ಅನೇಕ ಗಣ್ಯರು, ಕುಟುಂಬಸ್ಥರು, ಸ್ಥಳೀಯರು, ಸ್ನೇಹಿತರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು.
ಪರಿಹಾರ:
ಕಾಸರಗೋಡು ಕಡೆಯಿಂದ ಬರುತ್ತಿದ್ದ ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಕೆಎಸ್‌ಆರ್‌ಟಿಸಿ ಡಿಪೋ ವತಿಯಿಂದ ಸ್ಪೀಕರ್ ಯು.ಟಿ. ಖಾದರ್ ಸೂಚನೆ ಮೇರೆಗೆ ತಲಾ ಒಂದು ಲಕ್ಷದಂತೆ ಒಟ್ಟು ಆರು ಲಕ್ಷ ಪರಿಹಾರವನ್ನು ಶುಕ್ರವಾರ ವಿತರಣೆ ಮಾಡಲಾಯಿತು.
ಕೆಎಸ್‌ಆರ್‌ಟಿಸಿ ಮಂಗಳೂರು ಡಿಪೋದ ಡಿಟಿಒ ಕಮಲ್ ಕುಮಾರ್, ಮೆನೇಜರ್ ಪ್ರಶಾಂತ್, ಸಹಾಯಕ ಸಂಚಾರ ನಿರೀಕ್ಷಕ ಅಫ್ಝಲ್ ಅತೀಕ್, ಕೋಟೆಕಾರ್ ಪ.ಪಂ. ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಉಪಸ್ಥಿತರಿದ್ದರು.
ನಿನ್ನೆ ನಡೆದ ಘಟನೆಯಲ್ಲಿ ಗಾಯಗೊಂಡಿರುವ ಕಾಸರಗೋಡು ನಿವಾಸಿ ಲಕ್ಷ್ಮೀ ಹಾಗೂ ಅವರ ಪುತ್ರ ಸುರೇಂದ್ರ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂದರ್ಭದಲ್ಲಿ ಸಂಬಂದಿಕರ ಮನೆಗೆ ಬಂದ ಅವರು ಊರಿಗೆ ಮರಳಲು ಬಸ್‌ಗಾಗಿ ಕಾಯುತ್ತಿದ್ದರು.
ಸಹೋದರಿಯ ಮನೆಗೆ ತೆರಳಿದ್ದರು:
ಸಹೋದರಿಗಳಾದ ಖದೀಜ ಹಾಗೂ ನಫೀಸ ಅವರು ಕುಟುಂಬಸ್ಥರ ಜೊತೆ ಕುಂಜತ್ತೂರು ಬಳಿ ಇರುವ ಸಹೋದರಿ ಆಯಿಷ ಅವರ ಮನೆಗೆ ಗುರುವಾರ ಹೈದರ್ ಅವರ ರಿಕ್ಷಾದಲ್ಲಿ ತೆರಳಿದಾಗ ಈ ದುರ್ಘಟನೆ ಸಂಭವಿಸಿತ್ತು.
ಎಂಟು ವರ್ಷಗಳ ಹಿಂದೆ ಕಾಸರಗೋಡುವಿನಲ್ಲಿ ಮದುವೆ ಕಾರ್ಯ ಮುಗಿಸಿ ವಾಹನದಲ್ಲಿ ವಾಪಾಸು ಆಗುತ್ತಿದ್ದ ವೇಳೆ ಉಪ್ಪಳದಲ್ಲಿ ಸಂಭವಿಸಿದ ದುರಂತದಲ್ಲಿ ಇದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದರು.