ಯುವ ಸಮುದಾಯದಿಂದ ಕೃಷಿಯತ್ತ ಒಲವು

ಯುವ ಸಮುದಾಯದಿಂದ ಕೃಷಿಯತ್ತ ಒಲವು


ಬಂಟ್ಚಾಳ: ಪ್ರಸಕ್ತ ಕಾಲಘಟ್ಟದಲ್ಲಿ ಯುವ ಸಮುದಾಯವು ಕೃಷಿಯತ್ತ ಹೆಚ್ಚಿನ ಒಲವು ಹೊಂದಿದ್ದು, ಆಧುನಿಕತೆಯ ಸ್ಪರ್ಶವನ್ನು ನೀಡಿ, ಉತ್ತಮ ಇಳುವರಿಯನ್ನು ಪಡೆದ ಬಳಿಕ ಮಾರುಕಟ್ಟೆ ಸೃಷ್ಟಿಸಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಕಡೇಶಿವಾಲಯ ಗ್ರಾಮದ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಒಡ್ಡೂರು ಫಾರ್ಮ್ ಹೌಸ್‌ನ ಸಭಾಂಗಣದಲ್ಲಿ ನಡೆದ ರೈತ ಉತ್ಪಾದಕ ಸಂಸ್ಥೆ ನಿರ್ಮಾಣದ ಬಗ್ಗೆ ಮಾಹಿತಿ ಹಾಗೂ ಕೃಷಿ ಚಟುವಟಿಕೆಗಳ ವಿಶೇಷ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ರೈತ ಉತ್ಪಾದಿಸಿದ ಎಲ್ಲಾ ವಸ್ತುಗಳಿಗೂ ಉತ್ತಮವಾದ ಮಾರುಕಟ್ಟೆ ವ್ಯವಸ್ಥೆ ಇದ್ದು, ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ರೈತರು ಎಡವಿರುವುದೇ ಒಂದಷ್ಟು ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ  ಸಾಮಾಜಿಕ ಮಾಧ್ಯಮ ಕೃಷಿ ವಿಚಾರದಲ್ಲಿ ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಅನೇಕ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗಿದೆ ಎಂದ ಅವರು ಇಲಾಖೆಯ ಜೊತೆ ಸಂಪರ್ಕ ಸಾಧಿಸಿಕೊಂಡು ಆಧುನಿಕತೆಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸಬೇಕು ಎಂದರು.

ಕೃಷಿಯೇ ಜಿಲ್ಲೆಯ ಮೂಲಮಂತ್ರವಾಗಿದ್ದು, ಮಹಿಳೆಯರು ಸ್ವತಂತ್ರ ಬದುಕು ನಡೆಸಬೇಕಂಬ ಸದುದ್ದೇಶದಿಂದ ಕೃಷಿ ಉತ್ಪಾದನಾ ಕಂಪೆನಿ ನಿರ್ಮಿಸಲು ಕೇಂದ್ರ ಸರಕಾರ ಶೇ.೯೦  ಸಹಾಯಧನ ದೊರಕುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ವೀಣಾ ರೈ ಅವರು ಮಹಿಳೆಯರು ಗ್ರಾಮೀಣ ಭಾಗದಲ್ಲಿ ಸಮೂಹವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದು ಕಂಪೆನಿ ಮೂಲಕ ಮಾರುಕಟ್ಟೆ ಹೇಗೆ ಮಾಡಬಹುದು ಮತ್ತು ಇದರಿಂದ ಬರುವ ಲಾಭವೇನು? ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜ ಮಾತನಾಡಿ, ಕೃಷಿಕರು ಆರ್ಥಿಕವಾಗಿ ಸದೃಢ ವಾಗಲು ಕೇಂದ್ರ ಸರಕಾರ ಹಲವು ಯೋಜನೆ ಜಾರಿ ಮಾಡಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕಡೇಶಿವಾಲಯ ಗ್ರಾ.ಪಂ. ಅಧ್ಯಕ್ಷೆ ಭಾರತೀ ಎಸ್. ರಾವ್, ರೈತ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿದ್ಯಾಧರ ರೈ, ಮಾತೃ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬಬಿತಾ ಅವರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯರಾದ ಸನತ್ ಆಳ್ವ, ಸುರೇಶ್ ಬನಾರಿ, ಜಯ ಆರ್. ಮತ್ತು ದೇವಿಪ್ರಸಾದ್ ಶೆಟ್ಟಿ ಅವರು ಸಹಕರಿಸಿದರು.

ಕಡೇಶಿವಾಲಯ ಗ್ರಾ.ಪಂ. ಪಿ.ಡಿ.ಒ. ಸುನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article