ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾಗಿ ಬಂದ ಮಹಿಳಾ ಭಕ್ತರು: ಕಟೀಲಮ್ಮನ ಶೇಷವಸ್ತ್ರ ಪ್ರಸಾದ ಪಡೆದು ಧನ್ಯ
Sunday, September 28, 2025
ಕಟೀಲು: ತಮ್ಮ ಕಷ್ಟಗಳ ನಿವಾರಣೆಗೆ, ಇಷ್ಟಾರ್ಥ ಸಿದ್ದಿಗೆ ಕಟೀಲಮ್ಮನಿಗೆ ಸೀರೆ ಸಮರ್ಪಿಸಿ ಹರಕೆ ತೀರಿಸಿಕೊಳ್ಳುತ್ತಾರೆ. ಹೀಗೆ ಬಂದ ದೇವರ ಶೇಷವಸ್ತ್ರವನ್ನು ನವರಾತ್ರಿಯ ಲಲಿತಾ ಪಂಚಮಿಯ ದಿನ ರಾತ್ರಿ ಅನ್ನ ಪ್ರಸಾದ ಸ್ವೀಕರಿಸುವ ಪುಟ್ಟ ಕನ್ಯೆಯರಿಂದ ಹಿಡಿದು ಮುದುಕಿಯರವರೆಗೆ ಪ್ರಸಾದ ರೂಪವಾಗಿ ವಿತರಿಸಲಾಗುತ್ತಿದೆ.
ಕಟೀಲು ದೇವಸ್ಥಾನದಲ್ಲಿ ಶೇಷವಸ್ತ್ರ ವಿತರಿಸುವ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತ ಹೋಗುತ್ತಿದ್ದು, ಈ ಸಂಖ್ಯೆ ನಿನ್ನೆ ಶನಿವಾರ ಇಪ್ಪತ್ತೈದು ಸಾವಿರ ದಾಟಿದೆ.
ಸೀರೆ ವಿತರಣೆಗಾಗಿ ಈ ಬಾರಿ ಸರತಿಸಾಲಿನ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಲಾಗಿತ್ತು. ರಥಬೀದಿಯಲ್ಲಿ ಬ್ಯಾರೀಕೇಡ್ ಅಳವಡಿಸಿ, ದೇಗುದ ಎದುರು ಅಟ್ಟಳಿಗೆ ನಿರ್ಮಿಸಿ ನೇರ ಭೋಜನಶಾಲೆಗೆ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಗಂಟೆ ೪ರಿಂದಲೇ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾಗಿ ಬಂದ ಮಹಿಳಾ ಭಕ್ತರು, ಬಸ್ ನಿಲ್ದಾಣದಿಂದ ಆರಂಭಗೊಂಡ ಸರತಿ ಸಾಲಿನಲ್ಲಿ ಸಾಗುತ್ತ ರಥಬೀದಿಯಲ್ಲಿ ಸುತ್ತು ಹಾಕುತ್ತ ಅಲ್ಲಿಂದ ಅಟ್ಟಳಿಗೆ ಸಾಲನ್ನು ಹತ್ತಿ ಇಳಿದು, ಮುಂದೆ ದೇಗುಲದ ಒಳಗೆ ಸಾಗುತ್ತ, ನಂದಿನಿ ನದಿಯ ಎರಡೂ ಸೇತುವೆಗಳನ್ನು ದಾಟಿ, ಮತ್ತೆ ಮುಂದೆ ಹೋಗಿ ಹೋಗಿ ಭೋಜನಶಾಲೆಯನ್ನು ತಲುಪುವ ಹೊತ್ತಿಗೆ ಅಲ್ಲಿ ಅರ್ಚಕರು ಶೇಷವಸ್ತ್ರ ಪ್ರಸಾದವನ್ನು ನೀಡುತ್ತಿದ್ದರು. ಹೀಗೆ ಅನ್ನಪ್ರಸಾದವನ್ನೂ ಪಡೆದು ಧನ್ಯರಾಗುತ್ತಿದ್ದರು. ಭೋಜನಶಾಲೆಯ ಹಿಂಬದಿಯಿಂದ ಕುದ್ರು ದಾಟಿ ಮತ್ತೆ ಬಸ್ ನಿಲ್ದಾಣ, ರಥಬೀದಿಗೆ ವಾಪಾಸಾಗುವ ವ್ಯವಸ್ಥೆ ಮಾಡಲಾಗಿತ್ತು.
ಬಹು ಹಿಂದೆ ಸೀರೆಯನ್ನು ನಾಲ್ಕು ತುಂಡು ಮಾಡಿ ರವಿಕೆಕಣಗಳನ್ನಾಗಿಸಿ ನೀಡಲಾಗುತ್ತಿತ್ತು. ದೇವೀ ಸನ್ನಿಧಾನಕ್ಕೆ ಬರುವ ಸೀರೆಗಳ ಸಂಖ್ಯೆ ಏರುತ್ತ ಹೋದಂತೆ, ಮಹಿಳಾ ಭಕ್ತರಿಗೆ ಪೂರ್ತಿ ಶೇಷವಸ್ತ್ರವನ್ನು ನೀಡುವುದನ್ನು ಆಡಳಿತ ಮಂಡಳಿ ಆರಂಭಿಸಿತು. ಹಾಗೆ ಶೇಷವಸ್ತ್ರ ಪಡೆದು ಧನ್ಯರಾಗಲು ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತ ಹೋಗಿದೆ.
ಶನಿವಾರ ತಡರಾತ್ರಿ 12 ಗಂಟೆಯವರೆಗೂ ಸೀರೆ ವಿತರಣೆ ಮಾಡಲಾಗುತ್ತಿತ್ತು.
ದೇವಿಗೆ ಸಂದಿದೆ 44 ಸಾವಿರ ಸೀರೆ:
ಕಳೆದ ವರ್ಷ 44 ಸೀರೆ ಅಲಂಕಾರಕ್ಕಾಗಿ ಬಂದಿದೆ. ಹೀಗೆ ಬಂದ ಸೀರೆಗಳನ್ನು ದೇಗುಲದಲ್ಲಿ ರೂ. ಎರಡು ಸಾವಿರಕ್ಕಿಂತ ಮೇಲ್ಪಟ್ಟ ಸೇವೆ ಮಾಡುವ ಭಕ್ತರಿಗೆ ನೀಡುವುದನ್ನು ಆರಂಭಿಸಲಾಯಿತು. ಸೇವಾ ಮೊತ್ತದ ಶೇಕಡಾ ಹತ್ತರ ಮೊತ್ತದ ಸೀರೆಯನ್ನು ಸೇವಾದಾರರಿಗೆ ಅಂದರೆ ರಂಗಪೂಜೆ, ಅನ್ನದಾನ, ವಿದ್ಯಾದಾನ, ಭೂದಾನ, ಗೋದಾನ ಹೀಗೆ ನಾನಾ ಸೇವಾಕರ್ಥರಿಗೆ ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ಇದಲ್ಲದೆ, ಶೇಷವಸ್ತ್ರ ಕೌಂಟರ್ ತೆರೆದು ಅಲ್ಲಿ ದೇವರಿಗೆ ಸಮರ್ಪಿತ ಸೀರೆಯ ಮೊತ್ತದ ಇಪ್ಪತ್ತೈದು ಶೇಕಡಾ ಕಡಿಮೆ ಮೊತ್ತಕ್ಕೆ ವಾಪಾಸು ಭಕ್ತರಿಗೆ ನೀಡುವುದನ್ನು ಆರಂಭಿಸಲಾಯಿತು. ಈ ಮಾರಾಟದಿಂದ ದೇಗುಲಕ್ಕೆ ರೂಪಾಯಿ ಒಂದು ಕೋಟಿಗೂ ಮಿಕ್ಕಿ ಆದಾಯ ಬಂದಿದೆ. ಉಳಿದಂತೆ ಶೇಷವಸ್ತ್ರಗಳನ್ನು ಯಕ್ಷಗಾನದ ಮೇಳಗಳಿಗೆ, ದೇಗುಲಕ್ಕೆ ಆಗಮಿಸುವ ಗಣ್ಯರಿಗೆ, ಸೇವಾದಾರರಿಗೆ, ಸಾಂಸ್ಕೃತಿಕ ಕಾರ‍್ಯಕ್ರಮಗಳ ಕಲಾವಿದರಿಗೆ ಪ್ರಸಾದರೂಪವಾಗಿ ನೀಡಲಾಗುತ್ತದೆ.




