ಶರನ್ನವರಾತ್ರಿಯಲ್ಲಿ ಹೂವಿನಕೋಲು ಕಲಾಪ್ರಕಾರಕ್ಕೆ ಚಾಲನೆ
ಹೂವಿನಕೋಲು ಯಕ್ಷಗಾನ ಕಲಾ ಪ್ರಕಾರ ಮಕ್ಕಳ ಕಲಿಕೆಗೆ ದಾರಿ: ಸುಬ್ರಹ್ಮಣ್ಯ ಭಟ್
ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ವತಿಯಿಂದ ಆರಂಭಿಸಿದ ಚಿಣ್ಣರ ಸಾಂಪ್ರದಾಯಿಕ ಹೂವಿನಕೋಲು ತಂಡಗಳ ನವರಾತ್ರಿ ತಿರುಗಾಟಕ್ಕೆ ದೇವಸ್ಥಾನದಲ್ಲಿ ಚಾಲನೆ ನೀಡಿ ಅವರು ಶುಭ ಹಾರೈಸಿದರು.
ಚಿಣ್ಣರಿಂದೊಡಗೂಡಿದ ಎರಡು ತಂಡಗಳು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕೃಷ್ಣಾರ್ಜುನ ಕಾಳಗ ಪ್ರಸಂಗದ ತುಣುಕೊಂದನ್ನು ಪ್ರಸ್ತುತಪಡಿಸುವ ಮೂಲಕ ನವರಾತ್ರಿಯ ತಿರುಗಾಟವನ್ನು ಆರಂಭಿಸಿದವು.
ನವರಾತ್ರಿಯ ಶುಭ ಸಂದರ್ಭದಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಸಂಚರಿಸಿ, ನಮ್ಮ ಕಲಾ ಹಿರಿಮೆಯನ್ನು ಜನರಿಗೆ ಪರಿಚಯಿಸುವುದು, ಮನೆ ಮನೆಗಳಿಗೆ ತೆರಳಿ ಮಕ್ಕಳ ಮೂಲಕ ಶುಭ ಹರಸುವ ಕಾರ್ಯ ಶ್ಲಾಘನೀಯ ಎಂದು ಅರ್ಚಕ ಶ್ರೀನಿಧಿ ಭಟ್ ಮೆಚ್ಚುಗೆ ಸೂಚಿಸಿದರು.
ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್ ವೈದ್ಯ ವಿವರ ನೀಡಿ, ಚಿಣ್ಣರ ಹೂವಿನಕೋಲು ತಂಡಗಳು ಅ.2 ರವರೆಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮನೆ ಮನೆಗಳಿಗೆ ಭೇಟಿ ನೀಡಿ, ಪೌರಾಣಿಕ ಪ್ರಸಂಗಗಳ ತುಣುಕನ್ನು ಪ್ರಸ್ತುತಪಡಿಸಿ ಆಶೀರ್ವದಿಸುವರು ಎಂದರು.
ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ದೇವಳ ಕಚೇರಿ ವ್ಯವಸ್ಥಾಪಕ ನಟೇಶ್ ಕಾರಂತ್, ಕಲಾವಿದರಾದ ಗಣಪತಿ ಭಟ್, ರಾಹುಲ್ ಕುಂದರ್ ಕೋಡಿ ಕನ್ಯಾಣ ಉಪಸ್ಥಿತರಿದ್ದರು.