ಸೆ.5 ರಂದು ಸ್ವಲಾತ್ ಮೆರವಣಿಗೆ
Wednesday, September 3, 2025
ಮಂಗಳೂರು: ಈದ್ ಮೀಲಾದ್ ಅಂಗವಾಗಿ ಉಳ್ಳಾಲ ಜುಮ್ಮಾ ಮಸ್ಜಿದ್ ಮತ್ತು ಹಝ್ರತ್ ಸಯ್ಯಿದ್ ಮದನಿ ದರ್ಗಾದ ವತಿಯಿಂದ 27 ಮೊಹಲ್ಲಾಗಳ ಮತ್ತು 32 ಮದ್ರಸಗಳ ವಿದ್ಯಾರ್ಥಿಗಳು ಹಾಗೂ ಉಳ್ಳಾಲ ಮೊಹಲ್ಲಾ ನಿವಾಸಿಗಳಿಂದ ಬೃಹತ್ ಸ್ವಲಾತ್ ಮೆರವಣಿಗೆ ಸೆ.5 ರಂದು ಬೆಳಗ್ಗೆ 7 ಗಂಟೆಗೆ ನಡೆಯಲಿದೆ.
ಕೋಟಿಪುರ ಜುಮ್ಮಾ ಮಸ್ಜಿದ್ ವಠಾರದಿಂದ ವಾಹನ ಮತ್ತು ಕಾಲ್ನಡಿಗೆಯ ಮೂಲಕ ಮೆರವಣಿಗೆ ಹೊರಟು, ಪೇಟೆ- ಅಬ್ಬಕ್ಕ ವೃತ್ತ- ಮುಕ್ಕಚ್ಚೇರಿ- ಆಝಾದ್ ನಗರದಿಂದಾಗಿ ಉಳ್ಳಾಲ ಜುಮಾ ಮಸ್ಜಿದ್ ವಠಾರದಲ್ಲಿ ಕೊನೆಗೊಳ್ಳಲಿದೆ.
ಮೆರವಣಿಗೆಯಲ್ಲಿ ಹಸಿರು ಧ್ವಜ, ಪತಾಕೆ (ಉಳ್ಳಾಲ ಜಮಾತ್ನ ಕೊಡಿ) ಹೊರತುಪಡಿಸಿ ಇತರ ಯಾವುದೇ ಧ್ವಜವನ್ನು ಮೆರವಣಿಗೆಗೆ ಹಿಡಿಯುವುದಾಗಲೀ, ವಾಹನಕ್ಕೆ ಕಟ್ಟುವುದಾಗಲೀ ನಿಷೇಽಸಲಾಗಿದೆ. ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಅಲ್ಲದೆ ಯಾವುದೇ ಇನ್ನಿತರ ಬ್ಯಾನರ್ಗಳು ನಿಷೇಽಸಲಾಗಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾವುದೇ ಸಂಘ ಸಂಸ್ಥೆಗಳ ಪತಾಕೆ, ಅಹ್ಲುಸುನ್ನತ್ ವಲ್ ಜಮಾಅತ್ಗೆ ಸಂಬಂಧಪಡದ ಕರಪತ್ರ, ಭಿತ್ತಿಪತ್ರ ಪ್ರದರ್ಶಿಸುವಂತಿಲ್ಲ, ಅರಬಿಕ್ ಟ್ರಸ್ಟ್‌ನ ಅಧಿಕೃತ ವಾಹನದ ಬೈತ್ ಯಾನೆ ನಅತ್ ಅಲ್ಲದೆ ಇತರ ಯಾವುದೇ ಘೋಷಣೆಯೂ ಆಕ್ಷೇಪಣಾರ್ಹವಾಗಿದೆ. ಈ ಬಗ್ಗೆ 32 ಮೊಹಲ್ಲಾ ಮಸೀದಿ ಆಡಳಿತ ಸಮಿತಿಗೆ ಪತ್ರ ಬರೆದು ನಿರ್ದೇಶಿಸಲಾಗಿದೆ. ಮೀಲಾದ್ ರ್‍ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಅವುಗಳನ್ನು ಕಡಿವಾಣ ಹಾಕಲು ಯುವಕರಿಗೆ ನಿರ್ದೇಶನ ನೀಡಿ ಉಳ್ಳಾಲ ಪ್ರದೇಶದ ಆಸು ಪಾಸಿನ ಮಸೀದಿ ಆಡಳಿತ ಸಮಿತಿಗೆ ಪತ್ರ ಬರೆಯಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ಅಹ್ಮದ್, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಮುಸ್ತಫಾ ಮದನಿನಗರ ಉಪಸ್ಥಿತರಿದ್ದರು.