ಬಳ್ಕುಂಜೆ ವ್ಯಾಪ್ತಿಯಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ: ಎಸ್ಸಿ-ಎಸ್ಟಿ ಸಭೆಯಲ್ಲಿ ದಲಿತ ಮುಖಂಡರ ಆರೋಪ
ಮಂಗಳೂರು: ಬಳ್ಕುಂಜೆ ವ್ಯಾಪ್ತಿಯಲ್ಲಿ ಅಸ್ಪೃಶ್ಯತೆ ಇನ್ನೂ ಆಚರಣೆಯಲ್ಲಿದ್ದು, ಮೇಲ್ವರ್ಗದವರ ಮನೆಯ ಬಾವಿಯಿಂದ ನೀರು ಸೇದುವುದಕ್ಕೆ ಅವಕಾಶವಿಲ್ಲ. ಹಗ್ಗವನ್ನು ಮುಟ್ಟಲೂ ಬಿಡುವುದಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ರವಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪರಿಶಿಷ್ಟಜಾತಿ-ಪಂಗಡದವರ ಕುಂದುಕೊರತೆ ಆಲಿಕೆ ಸಭೆಯಲ್ಲಿ ಈ ಆರೋಪಗಳು ಕೇಳಿ ಬಂತು.
ದಲಿತ ಸಂಘಟನೆ ಮುಖಂಡ ಜಯಾ ಕಾಟಿಪಳ್ಳ ಅವರು ಮಾತನಾಡಿ, ಬಳ್ಕುಂಜೆ ವ್ಯಾಪ್ತಿಯ ಶಾಂತ ಎಂಬ ದಲಿತ ಮಹಿಳೆಯೊಬ್ಬರ ಮನೆ 6 ತಿಂಗಳ ಹಿಂದೆ ಬಿದ್ದು ಹೋಗಿದೆ. ಆದರೆ ಗ್ರಾ.ಪಂ. ನಿಂದ ಯಾರೊಬ್ಬರೂ ಭೇಟಿ ನೀಡಿಲ್ಲ. ಇನ್ನು ಪಂಚಾಯತ್ ಅಧ್ಯಕ್ಷರ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋ ಇಲ್ಲ, ಈ ವಿಚಾರ ಪಂಚಾಯತ್ ಸಭೆಯಲ್ಲೂ ಪ್ರಸ್ತಾಪವಾಗಿದ್ದು, ‘ಕೇಳಿದರೆ ಅದು ಬೇಕಾಗಿಲ್ಲ’ ಎನ್ನುವ ಹೇಳುತ್ತಾರೆ ಎಂದು ಆರೋಪಿಸಿದರು. ಮುಖಂಡ ಸದಾಶಿವ ಉರ್ವಸ್ಟೋರ್ ಅವರು ಗ್ರಾಮದಲ್ಲಿರುವ ಅಸ್ಪೃಶ್ಯತೆ ಪದ್ಧತಿ ಪದ್ಧತಿ ಕುರಿತು ಸಭೆಯಲ್ಲಿ ವಿವರಿಸಿದರು.
ದಲಿತ ಮುಖಂಡರ ಆರೋಪಗಳಿಗೆ ಉತ್ತರಿಸಿದ ಡಿಸಿಪಿ ಮಿಥುನ್ ಎಚ್.ಎನ್. ಅವರು, ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಬೇಕು. ಪಂಚಾಯತ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಗ್ರಾಮಸ್ಥರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಮೂಲ್ಕಿ ಠಾಣೆ ಪೊಲೀಸರಿಗೆ ಸೂಚಿಸಿದರು.
ಅಂಬೇಡ್ಕರ್ ವೃತ್ತಕ್ಕೆ ಭೂಮಿ ಪೂಜೆ ನಡೆಸಿ ಒಂದು ವರ್ಷವಾಗಿದ್ದು, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ಮನಪಾ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮತ್ತು ಸ್ಮಾರ್ಚ್ ಸಿಟಿ ಎಂಡಿ ಆಗಿರುವ ಈ ಹಿಂದಿನ ಅಪರ ಜಿಲ್ಲಾಧಿಕಾರಿ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಸುಧಾಕರ್ ಆಗ್ರಹಿಸಿದರು.
ಹುಲ್ಲು ತೆರವು ಮಾಡುತ್ತಿದ್ದ ಪೌರಕಾರ್ಮಿಕರೊಬ್ಬರ ಕಣ್ಣಿಗೆ ಗಾಜಿನ ತುಂಡು ಬಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡದೆ ಕಣ್ಣಿನ ದೃಷ್ಟಿಹೋಗಿದೆ. ಇಎಸ್‌ಐ ಮೂಲಕ ಸುಮಾರು 2 ಲಕ್ಷ ರೂ. ಬಿಲ್ ಆಗಿದ್ದು, ಕಣ್ಣಿನಲ್ಲಿ ಗಾಜಿನ ತುಂಡು ಉಳಿದು ಕೀವು ಆಗಿದ್ದು, ಬಳಿಕ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆಸಲಾಗಿದೆ. ಒಂದು ಒಂದು ಕಣ್ಣಿನ ದೃಷ್ಟಿಇಲ್ಲದೆ ಸಮಸ್ಯೆಯಾಗಿದೆ ಇದಕ್ಕೆ ಯಾರು ಹೊಣೆ ಎಂದು ದಲಿತ ಮುಖಂಡ ಎಸ್‌ಪಿ ಆನಂದ್ ಪ್ರಶ್ನಿಸಿದರು.
ಉತ್ತರಿಸಿದ ಡಿಸಿಪಿ ಈ ಬಗ್ಗೆ ಡಿಚ್‌ಒ ಅವರಿಗೆ ದೂರು ನೀಡಬಹುದು. ಬೆಂಗಳೂರಿನ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ಗೂ ದೂರು ನೀಡಿ. ಅವರು ವಿಚಾರಣೆ ನಡೆಸುತ್ತಾರೆ. ವೈದ್ಯರನ್ನು ಸಸ್ಪೆಂಡ್ ಮಾಡುವ ಅಧಿಕಾರವೂ ಅವರಿಗೆ ಇದೆ ಎಂದರು.
ಮಂಗಳೂರು ವಿಶ್ವವಿದ್ಯಾಲಯದಲ್ಲಿಯೂ ದಲಿತರನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿದ್ದು, ದಲಿತ ಎನ್ನುವ ಕಾರಣಕ್ಕೆ ಎಚ್‌ಒಡಿ ಹುದ್ದೆಯಿಂದ ತೆಗೆಯುವ ಪ್ರಯತ್ನಗಳು ನಡೆಯುತ್ತಿದೆ. ಅದಕ್ಕಾಗಿ ಎಂಸಿಜೆ ವಿಭಾಗದ ಶುಲ್ಕವನ್ನು ಏರಿಕೆ ಮಾಡಿ ವಿದ್ಯಾರ್ಥಿಗಳು ಬಾರದಂತೆ ತಡೆದು, ವಿಭಾಗವನ್ನೇ ಮುಚ್ಚುವ ಹುನ್ನಾರವೂ ನಡೆಯುತ್ತಿದೆ ಎಂದು ಎಂ.ಪಿ. ಉಮೇಶ್ ಚಂದ್ರ ಆರೋಪಿಸಿದರು. ಉತ್ತರಿಸಿದ ಡಿಸಿಪಿ, ಈ ವಿಚಾರವನ್ನು ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದರೆ ಉತ್ತಮ ಎಂದರು.
ಡಿಸಿಆರ್‌ಇ ಎಸ್‌ಪಿ ಸೈಮನ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಕೆ. ಉಪಸ್ಥಿತರಿದ್ದರು. ಎಸಿಪಿ ವಿಜಯಶಾಂತಿ, ಶ್ರೀಕಾಂತ್, ಪ್ರತಾಪ್ ಸಿಂಗ್ ಥೋರಟ್ ಸೇರಿದಂತೆ ವಿವಿಧ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.