ಸರಕಾರಿ ವೆನ್ಲಾಕ್ ಶುಶ್ರೂಷ ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ಬಾಕಿ ಇರಿಸಿದ ಸ್ಟೈಫಂಡ್ ಬಿಡುಗಡೆಗೆ ಡಿವೈಎಫ್ಐ-ಎಸ್.ಎಫ್.ಐ. ಒತ್ತಾಯ: ಅನಿರ್ದಿಷ್ಟಾವಧಿ ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ವೆನ್ಲಾಕ್ ಶುಶ್ರೂಷ ಕಾಲೇಜಿನಲ್ಲಿ ವ್ಯಾಸಂಗ ಹೊಂದುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ಕಳೆದ ನಾಲ್ಕು ವರುಷಗಳಿಂದ ಸಿಗಬೇಕಾಗ ಸ್ಟೈಫಂಡನ್ನು ಸಮಯಕ್ಕೆ ಸರಿಯಾಗಿ ವಿತರಿಸದೆ ಈವರೆಗೂ ಬಾಕಿ ಇರಿಸಿದೆ. ಪ್ರತೀ ತಿಂಗಳು ವಿತರಿಸಬೇಕಾದ ಮೊತ್ತವನ್ನು ವೈದ್ಯಕೀಯ ಇಲಾಖೆ ಈವರೆಗೂ ನೀಡದೆ ಬೇಜವಾಬ್ದಾರಿ ವಹಿಸಿದ್ದು, ಅದನ್ನೇ ನಂಬಿ ಬದುಕುವಂತಹ ವಿದ್ಯಾರ್ಥಿಗಳು ಬಹಳ ತೊಂದರೆಯನ್ನು ಅನುಭವಿಸುವಂತಾಗಿದೆ. ಸರಕಾರಿ ವೆನ್ಲಾಕ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬಾಕಿ ಇರಿಸಿದ ಸ್ಟೈಫಂಡ್ ಮೊತ್ತವನ್ನು ಕೂಡಲೇ ಬಿಡುಗಡೆಗೊಳಿಸಲು ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ, ಎಸ್ಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ಒತ್ತಾಯಿಸಿದೆ.
ವೆನ್ಲಾಕಿನ ಸರಕಾರಿ ಶುಶ್ರೂಷ ಕಾಲೇಜಿನಲ್ಲಿ ವ್ಯಾಸಂಗ ಹೊಂದುವ ನರ್ಸಿಂಗ್ ವಿದ್ಯಾರ್ಥಿಗಳಿಗೆ ಮೊದಲ ವರುಷ ಪ್ರತೀ ತಿಂಗಳಿಗೆ 1500, ಎರಡನೇ ವರುಷಕ್ಕೆ 1700, ಮೂರನೇ ವರುಷಕ್ಕೆ 1900 ರೂ.ರಂತೆ ಒಟ್ಟು ಮೂರು ವರುಷಕ್ಕೆ ತಲಾ ಒಂದು ವಿದ್ಯಾರ್ಥಿಗೆ ಸಿಗಬೇಕಾದ 61,200 ರೂ. ಶಿಷ್ಯ ವೇತನ ಮೊತ್ತವನ್ನು ಈವರೆಗೂ ನೀಡದೆ ಬಹುದೊಡ್ಡ ಅನ್ಯಾಯವನ್ನು ಎಸಗಿದೆ.
ಈ ಬಗ್ಗೆ ನರ್ಸಿಂಗ್ ವಿದ್ಯಾರ್ಥಿಗಳು ಹಲವಾರು ಬಾರಿ ಸಂಬಂಧಪಟ್ಡ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಶಿಷ್ಯವೇತನ ಬಿಡುಗಡೆಗೊಳಿಸುವ ಕ್ರಮಕ್ಕೆ ಈವರೆಗೂ ಮುಂದಾಗದಿರುವುದು ಖಂಡನೀಯ. ದಕ್ಷಿಣ ಕನ್ನಡ ಸೇರಿದಂತೆ ಹೊರ ಜಿಲ್ಲೆಗಳಿಂದ ಮೆರಿಟ್ ಆಧಾರದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳೆಲ್ಲರೂ ಬಹುತೇಕ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರು. ಸರಕಾರ ವಿತರಿಸುವ ಸ್ಟೈಫಂಡನೇ ನಂಬಿ ಬದುಕುತ್ತಿರುವ ಈ ವಿದ್ಯಾರ್ಥಿಗಳು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅಲ್ಲದೇ ಈ ವಿದ್ಯಾರ್ಥಿಗಳನ್ನು ತಮ್ಮ ಶಿಕ್ಷಣ ಪಡೆಯುವ ಅವಧಿಯಲ್ಲೂ ವೆನ್ಲಾಕ್ ಆಸ್ಪತ್ರೆಗಳಲ್ಲಿ ಒಟ್ಟು 8 ತಾಸು ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಅಪಾಯಕಾರಿ ರೋಗಗಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿ ನಡುವೆ ಈ ವಿದ್ಯಾರ್ಥಿಗಳನ್ನು ದುಡಿಸಿಕೊಳ್ಳುವಂತಹ ಸಂದರ್ಭದಲ್ಲಿ ಹೆಲ್ತ್ ಕೇರ್ ವರ್ಕರ್ಗಳಿಗೆ ಅಂದರೆ ಡಾಕ್ಟರ್, ನರ್ಸ್ಗಳಿಗೆ ಹೆಪಟೈಟಿಸ್ ಬಿ ನಿರೋಧಕ ಚುಚ್ಚುಮದ್ದು ನೀಡಬೇಕೆಂಬ ನಿಯಮಗಳಿದ್ದರೂ ಈ ವಿದ್ಯಾರ್ಥಿಗಳಿಗೆ ಈ ಚುಚ್ಚುಮದ್ದನ್ನು ನೀಡದೆ ದುಡಿಸಿಕೊಳ್ಳುತ್ತಿರುವುದರಿಂದ ಇವರ ಜೀವಕ್ಕೆ ತೊಂದರೆಯಾಗುವ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿದೆ. ಈ ಬಗ್ಗೆ ಕನಿಷ್ಟ ಕಾಳಜಿಯೂ ವಹಿಸದ ವೈದ್ಯಕೀಯ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇಂತಹ ಬೇಜವಾಬ್ದಾರಿತನ ವಹಿಸಿರುವುದನ್ನು ಡಿವೈಎಫ್ಐ, ಎಸ್ಎಫ್ಐ ವಿರೋಧಿಸುತ್ತದೆ.
ಈ ಕೂಡಲೇ ದ.ಕ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮೇಲಾಧಿಕಾರಿ ಸರಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬಾಕಿ ಇರಿಸಿರುವ ಎಲ್ಲಾ ಮೊತ್ತವನ್ನು ಬಿಡುಗಡೆಮಾಡಿ ವಿತರಿಸುವ ಕ್ರಮಕ್ಕೆ ಮುಂದಾಗಬೇಕು. ಹಾಗೂ ಪ್ರತೀ ತಿಂಗಳು ಸ್ಟೈಫಂಡ್ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವ ಕ್ರಮವನ್ನು ಕೈಗೊಳ್ಳಬೇಕು. ಅಲ್ಲದೇ ವಿದ್ಯಾರ್ಥಿಗಳನ್ನು ಹೆಲ್ತ್ ಕೇರ್ ವರ್ಕರ್ಗಳಾಗಿ ದುಡಿಸುವ ವೇಳೆ ಒಟ್ಟು 8 ಗಂಟೆ ಅವಧಿ ವಿಧಿಸಿರುವ ಕ್ರಮವನ್ನು ಕೈಬಿಟ್ಟು 6 ಗಂಟೆಗೆ ಇಳಿಸಬೇಕು ಹಾಗೂ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲು ಮುಂದಾಗಬೇಕೆಂದು ಡಿವೈಎಫ್ಐ, ಎಸ್ಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಮೇಲಿನ ಬೇಡಿಕೆಗಳನ್ನು ಈಡೇರಿಸುವ ಕ್ರಮಕ್ಕೆ ಮುಂದಾಗದೇ ಹೋದಲ್ಲಿ ಮುಂದಿನ ದಿನ ಸಂತ್ರಸ್ತ ವಿದ್ಯಾರ್ಥಿಗಳೊಂದಿಗೆ ಸೇರಿ ಅನಿರ್ದಿಷ್ಟವಾಧಿ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ ಎಂದು ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ವಿನುಶ ರಮಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.