ದ.ಕ ಜಿಲ್ಲೆಯಾಧ್ಯಂತ ದಿಢೀರ್ ಮಳೆ
ಮಂಗಳೂರು: ಹಲವು ದಿನಗಳಿಂದ ಮರೆಯಾಗಿದ್ದ ಮಳೆ ಶುಕ್ರವಾರ ದಿಢೀರ್ ಮಳೆ ಕಾಣಿಸಿಕೊಂಡಿದೆ.ದ.ಕ ಜಿಲ್ಲೆಯಾಧ್ಯಂತ ಶುಕ್ರವಾರ ಮದ್ಯಾಹ್ನದ ವರೆಗೆ ಬಿಸಿಲಿದ್ದು, ಮಧ್ಯಾಹ್ನದ ಬಳಿಕ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ ಕಾಣಿಸಿಕೊಂಡಿದೆ.
ಶುಕ್ರವಾರ ಬಿಸಿಲು ಹೆಚ್ಚಾಗಿದ್ದು, ಸಂಜೆಯಾಗುತ್ತಿದ್ದಂತೆ ಮಳೆ ಸುರಿಯಲು ಆರಂಭವಾಗಿದೆ. ಮಂಗಳೂರು ನಗರ ಭಾಗದಲ್ಲಿ ಮಳೆಯ ನಿರೀಕ್ಷೆ ಇಲ್ಲದೇ ಬಹಳಷ್ಟು ಕಡೆಯಲ್ಲಿ ಅರೆಬರೇ ಕಾಮಗಾರಿಗಳಿಂದ ಮಳೆ ನೀರು ಸರಾಗವಾಗಿ ಸಾಗಲು ಕಷ್ಟಕರವಾಗಿದ್ದು, ರಸ್ತೆಯಲ್ಲೇ ಹರಿಯುವ ದೃಶ್ಯಗಳು ಎಲ್ಲಡೆ ಕಾಣಿಸಿಕೊಂಡಿತ್ತು. ನವರಾತ್ರಿ ಅಂಗವಾಗಿ ಬಹಳಷ್ಟು ಕಡೆಯಲ್ಲಿ ಸಾಂಸ್ಕೃತಿಕ ಸೇರಿದಂತೆ ಧಾರ್ಮಿಕ ಕಾರ‌್ಯಕ್ರಮಗಳು ಸಾಗುತ್ತಿರುವುದರಿಂದ ಮಳೆ ದಿಡೀರ್ ಪ್ರವೇಶದಿಂದಾಗಿ ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗಿದೆ.
ಹಲವು ದಿನಗಳವರೆಗೆ ಮಳೆ ಸಾಧ್ಯತೆ
ಬಂಗಾಳಕೊಲ್ಲಿಯ ಒಡಿಸ್ಸಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಗಾಳಿ ಚಲಿಸುವ ಪಥದ ನಿಖರತೆ ಇನ್ನೂ ಸ್ಪಷ್ಟವಾಗಿಲ್ಲ. ಇದರ ಪರಿಣಾಮದಿಂದ ಮಳೆ ಸ್ವಲ್ಪ ಚುರುಕಾಗಿದ್ದು, ರಾಜ್ಯದಲ್ಲಿ ಒಂದು ವಾರದ ಕಾಲ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸೆ.28ರಂದು ಮಹಾರಾಷ್ಟ್ರದ ಮೂಲಕ ಸೆ. 29,30 ಮುಂಬಯಿ ಕರಾವಳಿಗೆ ಬರುವ ಸಾಧ್ಯತೆಯಿದೆ. ಈ ಕಾರಣದಿಂದ ಮುಂಬಯಿಯಿಂದ ಕೇರಳ ಕರಾವಳಿ ತೀರದ ವರೆಗೆ ಮಳೆ ಬರುವ ಸಾಧ್ಯತೆಯಿದೆ. ಮುಂಗಾರು ಮಳೆ ಮೂರನೇ ವಾರದಲ್ಲಿ ಕ್ಷೀಣಿಸಿದ ಬಳಿಕ ಹಿಂಗಾರು ಆರಂಭವಾಗುವ ಸಾಧ್ಯತೆಯಿದೆ ಎಂದು ಐಎಂಡಿ ವಿಜ್ಞಾನಿ ಸೂಚನೆ ನೀಡಿದ್ದಾರೆ.
ಮೀನುಗಾರರಿಗೆ ಎಚ್ಚರಿಕೆ
ಐಎಂಡಿಯ ಮಾಹಿತಿಯಂತೆ ಸೆ.27ರ ವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಪ್ರಕ್ಷುಬ್ದವಾಗಿರುತ್ತದೆ. ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮುನ್ನೆಚ್ಚರಿಕೆವಹಿಸಬೇಕು ಎಂದು ಮೀನುಗಾರಿಕಾ ಇಲಾಖೆ ಕೂಡ ಮಾಹಿತಿ ನೀಡಿದೆ.