ಕರಾವಳಿಯಲ್ಲಿ ಸಾಧಾರಣ ಮಳೆ ಸಾಧ್ಯತೆ
ಮಂಗಳೂರು: ಕರಾವಳಿಯಲ್ಲಿ ಭಾನುವಾರ ಹೆಚ್ಚಿನ ಸಮಯ ಮೋಡಕವಿದ ವಾತಾವರಣ ಕಂಡುಬಂದಿತ್ತು, ಹಲವಡೆ ಕೆಲವು ಹೊತ್ತು ಅಬ್ಬರದ ಮಳೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಭಾನುವಾರ ನಸುಕಿನ ಜಾವದಿಂದಲೇ ಜಿಟಿಜಿಟಿ ಮಳೆ ಕಾಣಿಸಿತ್ತು. ಬೆಳಗ್ಗೆ ಸ್ವಲ್ಪ ಹೊತ್ತು ಮಳೆಗೆ ಬಿಡುವು ಹೊರತುಪಡಿಸಿದರೆ ಇಡೀ ಮೋಡ ಆವರಿಸಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಅಷ್ಟಾಗಿ ನಿರಂತರ ಮಳೆಯಾಗದಿದ್ದರೂ ಮಂಗಳೂರಿನಲ್ಲಿ ಮಧ್ಯಾಹ್ನ , ಸಂಜೆ ಕೆಲವು ಹೊತ್ತು ಜಿಟಿಜಿಟಿ ಮಳೆ ಸುರಿದಿದೆ. ದ.ಕ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 7.1 ಮಿಮಿ ಮಳೆ ದಾಖಲಾಗಿತು.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ. ಸುಳ್ಯ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ, ಉಳಿದಂತೆ ಕರಾವಳಿಯ ಅಲ್ಲಲ್ಲಿ ಬಿಟ್ಟು ಬಿಟ್ಟು ಬಿರುಸಿನ ಮಳೆಯ ಸಾಧ್ಯತೆ ಇದೆ. ಈಗಿನಂತೆ ಅ. 4ರ ತನಕ ಈ ವಾತಾವರಣ ಮುಂದುವರಿಯುವ ಮುನ್ಸೂಚೆನೆ ಇದೆ. ಈಗಿನ ವಾಯುಭಾರ ಕುಸಿತವು ಇವತ್ತು ಮಹಾರಾಷ್ಟ್ರದ ಮುಂಬೈ ಮೂಲಕ ಅರಬ್ಬಿ ಸಮುದ್ರ ಸೇರುವ ನಿರೀಕ್ಷೆ ಇದೆ. ಅ.2ರ ಸುಮಾರಿಗೆ ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಇನ್ನೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಪ್ರಕ್ಷುಬ್ದವಾಗಿರುತ್ತದೆ. ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮುನ್ನೆಚ್ಚರಿಕೆವಹಿಸಬೇಕು ಎಂದು ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.