ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ: ಯುವಜನ ಜಾಥಾ

ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ: ಯುವಜನ ಜಾಥಾ


ಮಂಗಳೂರು: ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಲು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ದ. ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೆ.7ರಿಂದ 9 ರವರೆಗೆ ದ.ಕ ಜಿಲ್ಲಾದ್ಯಂತ ಯುವಜನ ಜಾಥಾ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸೆ. 7ರಂದು ಬೆಳಗ್ಗೆ 9.30ಕ್ಕೆ ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ಜಾಥಾಕ್ಕೆ ಚಾಲನೆ ದೊರೆಯಲಿದೆ. ಅನಂತರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಾಥಾ ಸಂಚರಿಸಲಿದೆ. ಸೆ.9ರಂದು ಸಂಜೆ 4ಕ್ಕೆ ಮಂಗಳೂರಿನಲ್ಲಿ ಸಮಾರೋಪ ನಡೆಯಲಿದ್ದು, ಸಾರ್ವಜನಿಕ ಸಭೆಯ ಮುನ್ನ ಡಾ ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಯುವಜನರ ಬೃಹತ್ ಮೆರವಣೆಗೆ ನಡೆಯಲಿರು ವುದು ಎಂದು ವಿವರಿಸಿದರು. 

ಪ್ರತೀ ಕುಟುಂಬದಲ್ಲೂ ಕನಿಷ್ಠ ಒಬ್ಬ ನಿರುದ್ಯೋಗಿ ಇದ್ದಾನೆ ಎನ್ನುವಷ್ಟು ಮಟ್ಟಿಗೆ ನಿರುದ್ಯೋಗ ಸಮಸ್ಯೆ ಬೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೆಡೆ ಹತಾಶ ನಿರುದ್ಯೋಗಿಗಳ ದಂಡೇ ಕಂಡು ಬರುತ್ತಿದೆ. ಇಲ್ಲಿರುವ ನೂರಾರೂ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹೊಂದಿ ಸರ್ಟಿಫಿಕೇಟ್ ಪಡೆದು ಹೊರಬರುತ್ತಿದ್ದರೂ ಅವರಿಗೆ ಅರ್ಹವಾದ ಶೇ. 5ರಷ್ಟು ಉದ್ಯೋಗಗಳು ಅವಿಭಜಿತ ದ.ಕ ಜಿಲ್ಲೆಯಲ್ಲಿ ಸೃಷ್ಡಿಯಾಗುತ್ತಿಲ್ಲ. ಇಲ್ಲಿನ ವೃತ್ತಿಪರ ಶಿಕ್ಷಣ ಸಂಸ್ಥೆಗಳು ದುಬಾರಿ ದರ ಪಡೆದು ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗುತ್ತಿವೆ ಎಂದು ಹೇಳಿದರು. 

ಬ್ಯಾಂಕುಗಳು, ರೈಲ್ವೆಗಳಲ್ಲಿ ಖಾಯಂ ಉದ್ಯೋಗಗಳು ಹೊರ ರಾಜ್ಯದವರಿಗಷ್ಟೆ ಮೀಸಲಾಗಿದೆ. ಇತ್ತೀಚೆಗೆ ಎಮ್‌ಆರ್ಪಿಎಲ್, ಎಸ್‌ಇಝಡ್ನ ಉದ್ಯೋಗಗಳ ನೇಮಕಾತಿಯಲ್ಲಿ ಸ್ಥಳೀಯ ಯುವಜನರನ್ನು ಹೊರಗಿಡುವುದು, ವಿಮಾನ ನಿಲ್ದಾಣ ಅದಾನಿ ಗುಂಪಿನ ವಶವಾದ ಬಳಿಕ ಗುತ್ತಿಗೆ ನೌಕರರಾದ ಸ್ಥಳೀಯರನ್ನು ಹೊರಗಟ್ಟಲಾಗುತ್ತದೆ ಎಂದು ಬಿ.ಕೆ ಇಮ್ತಿಯಾಝ್ ನುಡಿದರು. 

ತುಳುವಪ್ಪೆ ಜೋಕ್ಲೆಗ್ ಮಲ್ಲ ಪಾಲ್: 

ಆವಿಭಜಿತ ದ.ಕ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಎಲ್ಲಾ ಅವಕಾಶಗಳು ಇದ್ದರೂ ಸರಕಾರಗಳ ತಪ್ಪಾದ ನೀತಿಯಿಂದ ನಿರುದ್ಯೋಗಿಗಳ ಕೇಂದ್ರವಾಗಿ ಗುರುತಿಸಲ್ಪಡುತ್ತಿದೆ ಎಂದು ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದರು. 

ತುಳುನಾಡ್ದ ಅಭಿವೃದ್ದಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲ ಪಾಲ್ ಎಂಬ ಘೋಷಣೆಯಡಿ ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಲು, ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲು ಸೇರಿದಂತೆ ಪ್ರತೀ ತಾಲೂಕುಗಳಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವ, ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿ, ಗುತ್ತಿಗೆ ಉದ್ಯೋಗಗಳನ್ನು ಕಡಿಮೆಗೊಳಿಸಿ ಖಾಯಂ ನೌಕರರ ನೇಮಕ ಮಾಡಿಕೊ ಳ್ಳಲು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುವಜನರ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು. 

ಸಮಾರೋಪ ಸಮಾರಂಭದಲ್ಲಿ ಭಾಷಣಗಾರರಾಗಿ ಡಿವೈಎಫ್‌ಐ ಕೇಂದ್ರ ಸಮಿತಿ ಸದಸ್ಯ ಹಾಗೂ ಕೇರಳದ ಶಾಸಕ ಎಂ. ವಿಜಿನ್, ಮುಖ್ಯ ಅತಿಥಿಗಳಾಗಿ ಡಿವೈಎಫ್‌ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಪ್ರೊ.ಫಣಿರಾಜ್ ಭಾಗವಹಿಸಲಿದ್ದಾರೆ. ಸಾವಿರಕ್ಕೂ ಅಧಿಕ ಯುವಜನರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ಜಿಲ್ಲಾ ಪದಾಧಿಕಾರಿಗಳಾದ ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್ , ತಯ್ಯೂಬ್ ಬೆಂಗ್ರೆ ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article