ಮೈಸೂರು ದಸರಾದಷ್ಟೇ ಮಂಗಳೂರು ದಸರಾ ವೈಭವಯುತವಾಗಿ ನಡೆಯುತ್ತಿದೆ: ರಾಮಲಿಂಗ ರೆಡ್ಡಿ

ಮೈಸೂರು ದಸರಾದಷ್ಟೇ ಮಂಗಳೂರು ದಸರಾ ವೈಭವಯುತವಾಗಿ ನಡೆಯುತ್ತಿದೆ: ರಾಮಲಿಂಗ ರೆಡ್ಡಿ


ಮಂಗಳೂರು: ನಾಡಿನ ಮಹಾ ಉತ್ಸವವಾಗಿರುವ ಮೈಸೂರು ದಸರಾದಷ್ಟೇ ಮಂಗಳೂರು ದಸರಾ ವೈಭವಯುತವಾಗಿ ನಡೆಯುತ್ತಿದೆ. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಮಾರ್ಗದರ್ಶನದಲ್ಲಿ  ನಡೆಯುತ್ತಿರುವ ಈ ದಸರಾ ನಾಡಿನ ಹೆಮ್ಮೆಯ ಉತ್ಸವವಾಗಿ ರೂಪುಗೊಂಡಿದೆ ಎಂದು ರಾಜ್ಯ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರು ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು.

ಜನಾರ್ದನ ಪೂಜಾರಿಯವರ ನಾಯಕತ್ವ ಎಂತಹುದು ಅಂದ್ರೆ ಬೆಂಗಳೂರಿನಲ್ಲೂ  ಒಂದು ಬಾರಿ ದಸರಾ ಹಬ್ಬವನ್ನು ವೈಭವದಿಂದ ಮಾಡಿಸಿದ್ದರು. ನಾನು ಹಲವು ವರ್ಷದ ಹಿಂದೆ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ದಸರಾ ವೈಭವ ಕಂಡು ತುಂಬಾ ಖುಷಿಯಾಯಿತು. ಎಲ್ಲರಿಗೂ ನಾಡದೇವಿ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.

ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ನಮ್ಮ ದೇಶದ ಸಂಸ್ಕೃತಿಯ ಸಾರ ಕರ್ನಾಟಕದಲ್ಲಿ, ರಾಜ್ಯದ ಸಂಸ್ಕೃತಿಯ ಸಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈ ಜಿಲ್ಲೆಯ ಸಂಸ್ಕೃತಿಯ ಸಾರ ಕಾಣ ಸಿಗುವುದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ. ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ, ಈ ನೆಲದ ಶಕ್ತಿ. ಈ ಕ್ಷೇತ್ರದ ಜತೆ ಭಾವನಾತ್ಮಕ ಸಂಬಂಧವನ್ನು ಹೊಂದಿದವರು ನಾವು. ಆ ರೀತಿಯ ಒಡನಾಟ ಕ್ಷೇತ್ರ ಮತ್ತು ಜನಾರ್ದನ ಪೂಜಾರಿಗಳ ಜತೆಗಿದೆ. ಯಾವುದೇ ಧರ್ಮವೂ ಮನಸ್ಸು ಮತ್ತು ದೇಹಕ್ಕೆ ಘಾಸಿ ಮಾಡುವ ಕತ್ತಿಯಾಗಬಾರದು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ದೇಶ ನಮ್ಮದಾಗಿದ್ದು, ಅದೇ ಹಾದಿಯಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಶಾಸಕ ಜೆ.ಆರ್. ಲೋಬೋ, ಶಾಸಕ ಅಶೋಕ್ ಪಠಾಣ್, ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷರಾದ ಉರ್ಮಿಳಾ ರಮೇಶ್,  ಟ್ರಸ್ಟಿಗಳಾದ ಸಂತೋಷ್ ಪೂಜಾರಿ, ಕೃತಿನ್ ಡಿ. ಅಮೀನ್,ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಕಿಶೋರ್ ದಂಡೆಕೇರಿ, ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಸಾಂಸ್ಕೃತಿಕ ರಾಯಭಾರಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ತುಕರಾಂ ಪೂಜಾರಿ, ಲೇಡಿಗೋಷನ್ ವೈದ್ಯಾಧಿಕಾರಿ ಡಾ. ದುರ್ಗಾಪ್ರಸಾದ್ ಅವರನ್ನು ದಸರಾ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರು ದಸರಾ ಮಹೋತ್ಸವದ ಧ್ವಜವನ್ನು ಕ್ಷೇತ್ರದ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರ್ ಅವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ನಿರೂಪಿಸಿದರು.


ಮಂಗಳೂರು ದಸರಾಕ್ಕೂ ಅನುದಾನ: ಗುಂಡೂರಾವ್

ಮಂಗಳೂರು ದಸರಾ ಮಹೋತ್ಸವ ವೈಭವಯುತವಾಗಿ ನಡೆಯುತ್ತಿದ್ದು, ಮುಂದಿನ ವರ್ಷದಿಂದ ಮೈಸೂರು, ಮಡಿಕೇರಿ ಮಾದರಿಯಲ್ಲೇ ಮಂಗಳೂರು ದಸರಾಕ್ಕೂ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಮ್ಮ ದೇಶದ ಪ್ರಾಚೀನತೆ ಇಂದಿಗೂ ಉಳಿಯಲು ಮುಖ್ಯ ಕಾರಣ ಈ ನೆಲದ ಧಾರ್ಮಿಕ ನಂಬಿಕೆ, ಸಾಂಸ್ಕೃತಿಕತೆ ಕಾರಣ. ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಪರಂಪರೆ ನಮ್ಮ ದೇಶದ ಶಕ್ತಿಯಾಗಿದೆ. ಮಂಗಳೂರು ದಸರಾ ಮಹೋತ್ಸವ ಮೆರವಣಿಗೆಗೆ ರಾಜ್ಯ ಸರಕಾರದಿಂದಲೇ ಕಲಾತಂಡಗಳನ್ನು ಕಳುಹಿಸಿಕೊಡಲಾಗುವುದು ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article