ಆಳ್ವಾಸ್ ಕಾಲೇಜಿನಲ್ಲಿ ‘ಮಾಯಾಚಕ್ರ’ ಕಿರುಚಿತ್ರದ ಪ್ರೀಮಿಯರ್ ಪ್ರದರ್ಶನ
ಕಿರುಚಿತ್ರ ವೀಕ್ಷಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅವರು ಎಳವೆಯಲ್ಲಿಯೇ ಇಂತಹ ಸೃಜನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು ಸಮಾಜಕ್ಕೆ ಪ್ರೇರಣಾದಾಯಕ. ತನಿಖಾ ಪತ್ರಿಕೋದ್ಯಮದ ಕಥಾಹಂದರ ಹೊಂದಿರುವ ಈ ಕಿರುಚಿತ್ರವು, ಪತ್ರಕರ್ತರು ವೃತ್ತಿಜೀವನದಲ್ಲಿ ಎದುರಿಸಬೇಕಾಗುವ ತೊಂದರೆಗಳು, ಸವಾಲುಗಳು ಮತ್ತು ಸಮಾಜದ ಒತ್ತಡಗಳ ನೈಜ ಚಿತ್ರಣವನ್ನು ನೀಡುತ್ತದೆ. ‘ಮಾಯಾಚಕ್ರ’ದ ಇನ್ನೊಂದು ವಿಶೇಷತೆ, ಚಿತ್ರದಲ್ಲಿ ಸ್ಥಳೀಯ ಸ್ಥಳಗಳು ಮತ್ತು ಪ್ರತಿಭೆಗಳನ್ನು ಬಳಸಿರುವುದು. ಈ ಮೂಲಕ ಗ್ರಾಮೀಣ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ, ಪ್ರತಿಭಾವಂತರಿಗೆ ತಮ್ಮ ನಟನಾಕೌಶಲ್ಯವನ್ನು ತೋರಿಸಲು ವೇದಿಕೆ ಒದಗಿಸಲಾಗಿದೆ ಎಂದ ಅವರು ಗೌರವ್ ಹೆಗ್ಡೆ ಮತ್ತು ಅವರ ತಂಡದ ಚೊಚ್ಚಲ ಪ್ರಯತ್ನವನ್ನು ಶ್ಲಾಘಿಸಿದರು.
ಸಿನಿಮಾದ ನಿರ್ದೇಶಕ ಗೌರವ್ ಹೆಗ್ಡೆ ಮಾತನಾಡಿ, “ಈಗಿನ ರೀಲ್ಸ್ ಜಮಾನದಲ್ಲಿ ದೀರ್ಘ ಅವಧಿಯ ಕಿರುಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವುದು ಒಂದು ಸವಾಲಿನ ಕೆಲಸ. ಆ ಅಂಶವನ್ನು ಮನದಲ್ಲಿ ಇಟ್ಟುಕೊಂಡು, ನಾವು ಸುಮಾರು ಅರ್ಧ ಗಂಟೆಯ ಅವಧಿಯ ಸಿನಿಮಾವನ್ನು ತಯಾರಿಸಿದ್ದೇವೆ. ಈ ಕಿರುಚಿತ್ರದ ಮೂಲಕ ಸಾಮಾನ್ಯ ಜನರ ಹಕ್ಕನ್ನು ಪ್ರಶ್ನಿಸಲು ಮುಂದಾದ ಒಬ್ಬ ಪತ್ರಕರ್ತೆಯ ಧೈರ್ಯ, ಸತ್ಯಕ್ಕಾಗಿ ಹೋರಾಟ ಮತ್ತು ಆ ಹೋರಾಟದ ವಿರುದ್ಧ ಬಲಿಷ್ಠ ಲಾಬಿ ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ತಿಳಿಸಲಾಗಿದೆ. ಮಾಧ್ಯಮದ ಜವಾಬ್ದಾರಿ, ಸಮಾಜದಲ್ಲಿ ಬೇರೂರಿರುವ ಅಸಮರ್ಪಕ ಪದ್ಧತಿಗಳ ವಿರುದ್ಧ ಧೈರ್ಯದಿಂದ ನಿಲ್ಲುವ ಅಗತ್ಯ, ಮತ್ತು ಸತ್ಯಕ್ಕಾಗಿ ಹೋರಾಡುವವರ ಎದುರಿಸುವ ಸಂಕಷ್ಟಗಳನ್ನು ಚಿತ್ರಿಸಲಾಗಿದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಚಾಯ೯ ಡಾ. ಕುರಿಯನ್, ಸಂಗೀತ ನಿರ್ದೇಶಕ ಹಾಗೂ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಗೌತಮ್, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಸುದೀಪ್ ಇದ್ದರು.
ಕಿರಣ್ ಕಾಯ೯ಕ್ರಮ ನಿರೂಪಿಸಿದರು. ಶಶಾಂಕ್ ಸ್ವಾಗತಿಸಿ, ಸಮೀಕ್ಷಾ ವಂದಿಸಿದರು.