ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಮುಡಿಗೆ ದಸರಾ ಪದಕಗಳ ಗರಿ
Saturday, September 27, 2025
ಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ದಸರಾ ಕ್ರೀಡಾಕೂಟ ಉಪ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ.22 ರಿಂದ 25 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ಇಲ್ಲಿ ಜರುಗಿದ 2025ನೇ ಸಾಲಿನ ರಾಜ್ಯ ಮಟ್ಟದ ಸಿ.ಎಂ ಕಪ್ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾಲೇಜಿನ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಸ್ಪಂದನಾ ಅವರು ಮಹಿಳೆಯರ 48 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಚೈತ್ರಿಕಾ 4×400 ಮೀ ರಿಲೇಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ತೃತೀಯ ಬಿಎ ವಿದ್ಯಾರ್ಥಿ ರಂಜಿತ್ ಕುಮಾರ್ 110 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ, ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ದೃಶ್ಯಾರವರು 53 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ನಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ‘ಪಾಠ ಪಠ್ಯೇತರ ಚಟುವಟಿಕೆಗಳ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ಗುರುತಿಸಿಕೊಳ್ಳುವುದರ ಮೂಲಕ ತಾವು ಕಲಿಯುತ್ತಿರುವ ವಿದ್ಯಾಸಂಸ್ಥೆ, ಶಿಕ್ಷಕರು ಮತ್ತು ಪೋಷಕರ ಹೆಸರಿಗೆ ಕೀರ್ತಿಯನ್ನು ತರುತ್ತಿರುವುದು ಹೆಮ್ಮೆಯ ವಿಷಯ.ವಿದ್ಯಾರ್ಥಿಗಳ ಸಾಧನೆ ಹೀಗೆ ಮುಂದುವರಿಯಲಿ. ಕಾಲೇಜಿನ ಸಹಕಾರ ಸದಾ ಕ್ರೀಡಾಪಟುಗಳಿಗಿರುತ್ತದೆ’ ಎಂದರು.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಲಿಯಾಸ್ ಪಿಂಟೋ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.



