ಜಾತಿವಾರು ಜನಸಂಖ್ಯಾ ಗಣತಿಯಲ್ಲಿ ‘ಪರಿಯಾಳ’ ಎಂದೇ ನಮೂದಿಸಲು ಕರೆ
ಶಿರ್ವ: ರಾಜ್ಯ ಸರಕಾರದಿಂದ ಸೆ.7 ರಿಂದ ನಡೆಯಲಿರುವ ಜಾತಿವಾರು ಜನಸಂಖ್ಯಾ ಗಣತಿ ಮರು ಸೇರ್‍ಪಡೆಯಲ್ಲಿ ಪರಿಯಾಳಿಗಳೆಲ್ಲರೂ ಗಣತಿ ನಮೂನೆಯಲ್ಲಿ ಜಾತಿ ಕಲಂನಲ್ಲಿ ಜಾತಿ ‘ಪರಿಯಾಳ’ ಎಂದೇ ನಮೂದಿಸಬೇಕು ಎಂದು ಉಡುಪಿ ಜಿಲ್ಲಾ ಪರಿಯಾಳ ಸಂಘ(ರಿ) ಉಚ್ಚಿಲ-ಉಡುಪಿ ತಿಳಿಸಿದೆ.
ಉಪಜಾತಿ(ಮಡಿವಾಳ, ಕ್ಷೌರಿಕ, ಭಂಡಾರಿ ಇತ್ಯಾದಿ) ಅಲ್ಲದೆ ಉಪನಾಮ (ಬಲಿ,ಗೋತ್ರ,ಊರು ಆಧಾರಿತ)ಗಳನ್ನು ನಮೂದಿಸಬಾರದು. ಈ ಹಿಂದಿನ ಜನಗಣತಿಯಲ್ಲಿನ ತಪ್ಪುಗಳನ್ನು ಸರಿಪಡಿಸುವ ಸುವರ್ಣಾವಕಾಶವನ್ನು ಸದುಪಯೋಗಿಸಬೇಕಾಗಿದೆ. ಪರಿಯಾಳ ಸಮಾಜದ ನಿಖರವಾದ ಜನಸಂಖ್ಯೆಯನ್ನು ಸೂಕ್ತವಾಗಿ ಗುರುತಿಸಿ ಸರಕಾರದಿಂದ ಸಂವಿಧಾನಾತ್ಮಕವಾಗಿ ಸಿಗಬಹುದಾದ ಮೀಸಲಾತಿ/ಅವಕಾಶಗಳನ್ನು ಸಮಾಜದ ಆರ್ಥಿಕ,ಶೈಕ್ಷಣಿಕ,ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಪ್ರಗತಿಗಾಗಿ ಪಡೆಯಬೇಕಾಗಿದೆ ಎಂದು ಜಿಲ್ಲಾ ಪರಿಯಾಳ ಸಂಘದ ಆಶಯವಾಗಿದೆ.
ನಮ್ಮೀ ಪರಿಯಾಳ ಜಾತಿಯ ಅನೇಕ ಬಂಧುಗಳು ಉದ್ಯೋಗ ಹಾಗೂ ಶಿಕ್ಷಣವನ್ನು ಪಡೆಯುವ ಸಲುವಾಗಿ ದೇಶದ ವಿವಿದೆಡೆಗಳಲ್ಲಿ ಹಾಗೂ ವಿದೇಶದಲ್ಲಿ ನೆಲೆನಿಂತು ಹೆಚ್ಚಿನವರ ಜಾತಿ-ಪ್ರಮಾಣಪತ್ರ ಪರಿಯಾಳ ಎಂದು ನಮೂದಿಸದೆ ಇತರೆ ಜಾತಿಗಳ ಹೆಸರಿನಲ್ಲಿ ಪಡೆದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸರಕಾರಕ್ಕೂ, ಹಿಂದುಳಿದ ವರ್ಗಗಳ ಆಯೋಗಕ್ಕೂ ಸೂಕ್ತ ಮಾಹಿತಿಯೊಂದಿಗೆ ನೀಡಲಾಗಿದೆ.
ಸರಿಯಾದ ಜಾತಿ-ಪ್ರಮಾಣಪತ್ರವಿಲ್ಲದೆ ಬಂಧುಗಳು ಸರಕಾರದ ಸಕಲ ಸೌಕರ್ಯ, ಸವಲತ್ತುಗಳು, ಉದ್ಯೋಗ ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ತೊಂದರೆಗೊಳಪಟ್ಟಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಂಘವು ಪರಿಯಾಳಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ಮೂಲಭೂತ ಹಕ್ಕನ್ನು ಮೂಲದಿಂದಲೇ ಪಡೆಯಬೇಕು. ಮುಂದೆ ನಡೆಯಲಿರುವ ಸಮೀಕ್ಷೆಗೆ ಇದನ್ನು ವಿಶೇಷವಾಗಿ ಪರಿಗಣಿಸಿ ಜಾತಿ ‘ಪರಿಯಾಳ’ ಎಂದೇ ನಮೂದಿಸುವಂತೆ ವಿನಂತಿಸಿದೆ.
ಕರ್ನಾಟಕ ಸರಕಾರದ ಆದೇಶ ಸಂಖ್ಯೆ ಎಸ್‌ಡಬ್ಲ್ಯುಡಿ 225 ಬಿಸಿಎ 2000 ದಿನಾಂಕ 31-03-2002ರಲ್ಲಿ ‘ಪರಿಯಾಳ’ ಜಾತಿಯನ್ನು ಹಿಂದುಳಿದ ವರ್ಗಗಳ ಜಾತಿಗಳ ಪಟ್ಟಿಯಲ್ಲಿ ಪ್ರವರ್ಗ 2ಎ ಗೆ ಸೇರ್‍ಪಡೆಗೊಳಿಸಿದ್ದಲ್ಲದೆ ಹಿಂದೆ ನಡೆದ ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿನ ಪಟ್ಟಿಯಲ್ಲೂ ಪರಿಯಾಳ ಜಾತಿಗೆ ಕೋಡ್ ಸಂಖ್ಯೆ 0995 ಎಂದೂ ನಮೂದಿಸಿರುವುದನ್ನು ಗಮನಕ್ಕೆ ತರುತ್ತಿದ್ದೇವೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಕಟಪಾಡಿ ಯು.ಶಂಕರ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.