ದುಬೈ ಕ್ರಿಕೆಟ್ ತಂಡದಲ್ಲಿ ಕರ್ನಾಟಕದ ಆಟಗಾರ್ತಿ ಅಮೀಶಾ: ಅಂತಾರಾಷ್ಟ್ರೀಯ ಇಂಡೋರ್ ಮಹಿಳಾ ಕ್ರಿಕೆಟ್‌ಗೆ ಪಾದಾರ್ಪಣೆ
ಶ್ರೀಲಂಕಾದ ಕೊಲಂಬೊದಲ್ಲಿ ಸೆ.27ರಿಂದ ಅಕ್ಟೋಬರ್ 4 ತನಕ ನಡೆಯಲಿರುವ ಈ ಇಂಡೋರ್ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾ, ಶ್ರೀಲಂಕಾ, ಭಾರತದ ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಲ್‌ರೌಂಡರ್ ಅಮೀಶಾ ಆನಂದ್ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ವಳಾಲು ಪಟ್ಟೆ ನಿವಾಸಿ ಆನಂದ್ ಮತ್ತು ವಿನುತಾ ಆನಂದ್ ಅವರ ಪುತ್ರಿ.
ಇಂಡೋರ್ ಕ್ರಿಕೆಟ್ ಕೂಟದ ಅತ್ಯಂತ ಕಿರಿಯ ವಯಸ್ಸಿನ ಈಕೆ ಕರ್ನಾಟಕ ಮೂಲದ ಆಟಗಾರ್ತಿಯಾಗಿದ್ದಾಳೆ. ಈಗಾಗಲೇ ಈಕೆಗೆ ದುಬೈ ಕ್ರಿಕೆಟ್ ಬೋರ್ಡಿನ ಸೀಸನ್ (ಹಾರ್ಡ್) ಬಾಲ್ ಅಂಡರ್ 15, 16 ಮತ್ತು 19 ವಿಭಾಗದ ಪಂದ್ಯಕೂಟದಲ್ಲಿ ಇಂಗ್ಲೆಂಡ್,ನ್ಯೂಜಿಲ್ಯಾಂಡ್, ಅಮೇರಿಕಾ ಹಾಗೂ ಒಮನ್ ದೇಶದ ತಂಡಗಳ ವಿರುದ್ಧ ಆಡಿದ ಅನುಭವ ಇದೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಜೋರೂಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ ನಡೆದ ರೂಟ್‌ಕಪ್ ಪಂದ್ಯಾಟದಲ್ಲಿ ಅಂಡರ್ 16ರ ವಿಭಾಗದಲ್ಲಿ ಸತತ ಎರಡನೇ ಬಾರಿಗೆ ದುಬೈ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾಟದಲ್ಲಿ ದುಬೈ ತಂಡ ರೂಟ್‌ಕಪ್‌ನ್ನು ಗೆದ್ದುಕೊಂಡಿತ್ತು. ಕ್ರಿಕೆಟಿನೊಂದಿಗೆ ವಾಲಿಬಾಲ್, ಅಥ್ಲೆಟಿಕ್, ಈಜುಗಾರಿಕೆ. ಹಾಡುಗಾರಿಕೆ, ನೃತ್ಯ ಕ್ಷೇತ್ರದಲ್ಲೂ ಮುಂಚೂಣಿ ಸಾಧನೆಯ ಹೆಜ್ಜೆ ಇಟ್ಟಿರುವ ಅಮೀಶಾ ಅವರ ತುಳುನಾಡಿನ ಪ್ರತಿಭೆ.
ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ನಿಶಾ ಆಲಿ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ವೇಗದ ಬೌಲರ್ ಆಗಿರುವ ಅಮೀಶಾ ಎಮಿರೇಟ್ಸ್ ಕ್ರಿಕೆಟ್ ಬೋರ್ಡಿನ ಅಧಿಕಾರಿ ಛಾಯಾ ಮುದ್ಗಲ್ ಅವರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಹೆಜ್ಜೆ ಇಡುತ್ತಿರುವ ಗ್ರಾಮೀಣ ಬದುಕಿನ ಹಿನ್ನಲೆಯ ಅಮೀಶಾ ಆನಂದ್ ಯಶಸ್ಸು ಸಾಧಿಸಲಿ ಎಂಬ ಹಾರೈಕೆ ಬಜತ್ತೂರಿನ ಜನತೆಯದ್ದಾಗಿದೆ.