ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಾಸ್ತಿಕಟ್ಟೆಯ ನಿವಾಸಿ ಮಹಮ್ಮದ್ ನವಾಝ್ (34) ಬಂಧಿತ ಆರೋಪಿ.
ಬಬ್ಬುಕಟ್ಟೆಯ ಖಾಸಗಿ ಶಾಲೆಯ ಸ್ಕೂಲ್ ಬಸ್ಸು ಚಾಲಕನಾಗಿದ್ದ ನವಾಝ್ ವಿರುದ್ಧ ಆತನ ಮೊದಲ ಪತ್ನಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶದ ದಾವೆ ಹೂಡಿದ್ದರೆನ್ನಲಾಗಿದೆ. ಪತ್ನಿಗೆ ಜೀವನಾಂಶವನ್ನು ನೀಡದೆ, ಕೋರ್ಟ್‌ನ ವಾರೆಂಟ್ ಕ್ಯಾರೆ ಎನ್ನದೆ ನವಾಝ್ ತನ್ನ ವಿಳಾಸ ಬದಲಿಸಿ ತಪ್ಪಿಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಆರೋಪಿಯ ವಿರುದ್ಧ ಕಳೆದ ಒಂದು ವರುಷದಿಂದಲೂ ಕೋರ್ಟ್ ವಾರೆಂಟ್ ಜಾರಿ ಮಾಡುತ್ತಿದ್ದ ನ್ಯಾಯಾಲಯವು ಸೆ.2 ರಂದು ನವಾಝ್ ವಿರುದ್ಧ ಮತ್ತೆ ಬಂಧನ ವಾರೆಂಟ್ ಹೊರಡಿಸಿತ್ತು.
ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಪನೀರು ಸಮೀಪದ ಕಾಯರ್ ಪಳಿಕೆ ಎಂಬಲ್ಲಿನ ಮನೆಯೊಂದರಲ್ಲಿ ಆರೋಪಿ ನವಾಝ್ ಇರುವ ಬಗ್ಗೆ ಖಚಿತ ಪಡಿಸಿದ ಉಳ್ಳಾಲ ಪೊಲೀಸರು ಶುಕ್ರವಾರ ಮಧ್ಯಾಹ್ನ ಆತನನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕರಕೊಂಡು ಹೋಗುತ್ತಿರುವ ವೇಳೆ ಮನೆಯಲ್ಲಿದ್ದ ನವಾಝ್ ನ ತಾಯಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಯಾಕೆ ಆತನನ್ನ ಬಂಧಿಸುತ್ತಿರುವುದಾಗಿ ಪ್ರಶ್ನಿಸಿದ್ದಾರೆ.
ಈ ವೇಳೆ ಉಳ್ಳಾಲ ಪೊಲೀಸರು ಆರೋಪಿಯ ವಿರುದ್ಧ ಬಂಧನ ವಾರೆಂಟ್ ಇರುವುದಾಗಿ ಮಹಿಳೆಯಲ್ಲಿ ಸಮಜಾಯಿಷಿ ನೀಡಿದ್ದಾರೆ. ಆದರೂ ಮನೆಮಂದಿ ಆರೋಪಿಯನ್ನು ಪೊಲೀಸರು ಬಂಧಿಸಿ ಕರಕೊಂಡು ಹೋಗುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಆರೋಪಿ ಪರ ವಕೀಲರು ‘ಯಾವುದೇ ವಾರೆಂಟ್ ಇಲ್ಲದೆ ಉಳ್ಳಾಲದ ಭ್ರಷ್ಟ ಪೊಲೀಸರು ನವಾಝ್ ಎಂಬಾತನನ್ನ ಎಳಕೊಂಡು ಹೋಗುತ್ತಿರುವುದಾಗಿ’ ಬಿಂಬಿಸಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರೆನ್ನಲಾಗಿದೆ.
ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ ಸಂದೇಶವನ್ನು ಗಮನಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಘರಂ ಆಗಿ ಸ್ಪಷ್ಟನೆ ನೀಡಿದ್ದು ಆರೋಪಿಯ ವಿರುದ್ಧ ಬಂಧನ ವಾರೆಂಟ್ ಇತ್ತು, ಹಾಗಾಗಿ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ಜಾಲತಾಣಗಳಲ್ಲಿ ತಪ್ಪು ಸಂದೇಶ ರವಾನಿಸಿ ವೀಡಿಯೋ ಹರಿಯ ಬಿಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ತಾಯಿ ಹಾಗೂ ಅವರ ವಕೀಲರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.